September 29, 2026
Tuesday, September 29, 2026
spot_img

ಇಂದು ಅಂಗಾರಕ ಸಂಕಷ್ಟ ಚತುರ್ಥಿ: ಈ ದಿನದಂದು ವ್ರತ ಮಾಡಿದರೆ ಒಂದು ವರ್ಷದ ಫಲ

ಮಂಗಳವಾರದಂದು ಬರುವ ಸಂಕಷ್ಟ ಚತುರ್ಥಿಯನ್ನು ಅಂಗಾರಕ ಸಂಕಷ್ಟ ಚತುರ್ಥಿ ಅಥವಾ ಅಂಗಾರಕಿ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣಪತಿ ಆರಾಧನೆಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮಂಗಳವಾರ ಬರುವ ಈ ಸಂಕಷ್ಟಿ ವ್ರತವನ್ನು ಮಾಡಿದಲ್ಲಿ ಒಂದು ವರ್ಷದ ಫಲ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.

ಅಂಗಾರಕ ಹುಟ್ಟಿದ್ದು ಹೇಗೆ?

ಪೌರಾಣಿಕ ಕಥೆಯ ಪ್ರಕಾರ ಭಾರದ್ವಾಜ ಮಹರ್ಷಿಗಳು ಹಾಗೂ ಭೂಮಿ ದೇವಿಯ ಕೃಪೆಯಿಂದ ಅಂಗಾರಕನ ಜನನವಾಗುತ್ತದೆ. ಕೆಲವೊಂದು ಕಥೆಯ ಪ್ರಕಾರ ಶಿವ ದೇವರ ಪವಿತ್ರ ಬೆವರು ಭೂಮಿಯ ಒಡಲಿಗೆ ಬಿದ್ದು ಅಂಗಾರಕ ಹುಟ್ಟಿದ್ದಾನೆ ಎಂದು ಹೇಳಲಾಗುತ್ತದೆ. ಅಂಗಾರಕನು ನೋಡಲು ಕೆಂಪು ಬಣ್ಣದಲ್ಲಿದ್ದನು ಇದರಿಂದ ಆತನಿಗೆ ಅಂಗಾರಕ ಎನ್ನುವ ಹೆಸರು ಬಂದಿತು. ಮಹರ್ಷಿ ಭಾರದ್ವಾಜರು ಗಣೇಶ ದೇವನ ಪರಮ ಭಕ್ತರಾಗಿದ್ದರು. ಅಂಗಾರಕನು ಮಹರ್ಷಿಗಳ ಮಾರ್ಗದರ್ಶನದಲ್ಲಿ ಸಾವಿರ ವರ್ಷ ನರ್ಮದಾ ನದಿಯ ತೀರದಲ್ಲಿ ಶ್ರೀಗಣೇಶನನ್ನು ನೆನೆಯುತ್ತಾ ಕಠಿಣ ತಪಸ್ಸನ್ನು ಮಾಡಿದ್ದನು. ಅನ್ನ ನೀರಿಲ್ಲದೇ ಬಾಯಲ್ಲಿ ಗಣೇಶ ಮಂತ್ರವನ್ನೇ ಜಪಿಸುತ್ತಿದ್ದ ಅಂಗಾರಕನ ಭಕ್ತಿಗೆ ಮೆಚ್ಚಿದ ಗಣಪನು ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದ್ದನು.

ಮೂರು ವರಗಳು

ಮಂಗಳವಾರದ ಸಂಯೋಗದ ದಿನದಂದು ಗಣೇಶನು ಪ್ರತ್ಯಕ್ಷನಾಗಿ ಮೂರು ವರಗಳನ್ನು ಕೇಳು ನೀಡುತ್ತೇನೆ ಎಂದು ಹೇಳಿದನು. ಮೊದಲನೆಯ ವರ ದೇವತೆಗಳ ಸಾಲಿನಲ್ಲಿ ಉನ್ನತ ಸ್ಥಾನ ಬೇಕು, ಎರಡನೆಯ ವರ ಮೂರು ಲೋಕಗಳಲ್ಲಿಯೂ ತಾನು ಎಲ್ಲರಿಗೂ ಮಂಗಳಕರನಾಗಿ ಪ್ರಸಿದ್ಧಿ ಪಡೆಯಬೇಕು. ಮೂರನೇ ವರ ಗಣಪತಿಯ ಹೆಸರಿನ ಜೊತೆ ನನ್ನ ಹೆಸರನ್ನು ಸೇರಿಸಬೇಕು. ನೀವು ನನಗೆ ಕಾಣಿಸಿಕೊಂಡ ಈ ದಿನ ಎಲ್ಲರ ನೆನಪಿನಲ್ಲಿರಬೇಕು. ಈ ದಿನದಂದು ಉಪವಾಸ ಮಾಡಿ ಗಣಪನನ್ನು ಪೂಜಿಸುವ ಜನರ ಮನೋಕಾಮನೆಗಳು ಪೂರ್ಣಗೊಳ್ಳಬೇಕು ಎಂದು ಕೇಳಿಕೊಂಡಿದ್ದರು ಎನ್ನಲಾಗಿದೆ. ಮಂಗಳವಾರ ಬರುವ ಸಂಕಷ್ಟ ಚತುರ್ಥಿಯನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುತ್ತದೆ.

ಆಚರಣೆ ಹೇಗೆ?

ಈ ದಿನ ಭಕ್ತರು ಮುಂಜಾನೆಯೇ ಮಿಂದು ಉಪವಾಸ ಕೈಗೊಂಡು ಗಣೇಶನನ್ನು ಸ್ಮರಣೆ ಮಾಡುತ್ತಾರೆ. ಸಂಜೆ ಪೂಜೆಯ ವೇಳೆ ಗಣೇಶನಿಗೆ ಗರಿಕೆಯ ಅರ್ಚನೆ ಮಾಡಿ ನೈವೇದ್ಯವನ್ನು ಅರ್ಪಣೆ ಮಾಡಲಾಗುತ್ತದೆ. ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರ ವ್ರತ ಸಂಪೂರ್ಣವಾಗುತ್ತದೆ. ಈ ದಿನದಂದು ಉಪವಾಸ ಇದ್ದು ಬೇಡಿಕೊಳ್ಳುವ ಜನರ ಬೇಡಿಕೆಗಳನ್ನು ಗಣಪತಿ ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ.

Must Read