ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಗೆ ಸೋಮವಾರ ಕೊನೆಯ ದಿನವಾಗಿದ್ದು, ಇಂದು ಪಾವತಿಸಲು ವಿಫಲವಾಗಿದ್ದೇ ಆದರೆ, ದುಪ್ಪಟ್ಟು ಮೊತ್ತ ಪಾವತಿಸಬೇಕಾಗುತ್ತದೆ.
ಒಂದು ಬಾರಿಯ ಪಾವತಿಗೆ ನೀಡಿದ್ದ ಅವಕಾಶವನ್ನು ಹಲವು ಬಾರಿ ವಿಸ್ತರಿಸಿದ್ದ ಬಿಬಿಎಂಪಿ, ಅಂತಿಮವಾಗಿ ಮಾರ್ಚ್ 31ರ ಗಡುವು ವಿಧಿಸಿತ್ತು. ಇಂದು ಕೊನೆಯ ದಿನವಾಗಿದ್ದು, ಪಾವತಿಸಲು ವಿಫಲವಾದವರು ಏಪ್ರಿಲ್ 1 ರಿಂದ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಜೊತೆಗೆ, ಶೇ 9 ರ ಬಡ್ಡಿ ಸಹ ಪಾವತಿಸಬೇಕಾಗುತ್ತದೆ. ಬಿಬಿಎಂಪಿ ಕಾಯ್ದೆಯಲ್ಲಿ ತಿದ್ದುಪಡಿ ಹಿನ್ನೆಲೆ ಡಬಲ್ ತೆರಿಗೆ ಪಾವತಿಸಬೇಕಾಗುತ್ತದೆ.
ಪಾಲಿಕೆಗೆ 400 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಬರಬೇಕಿದ್ದು, ಇವುಗಳಲ್ಲಿ ಕೆಲವು ಸರ್ಕಾರಿ ಕಟ್ಟಡಗಳ ಆಸ್ತಿ ತೆರಿಗೆ ಕೂಡ ಬಾಕಿ ಇದೆ ಎಂದು ತಿಳಿದುಬಂದಿದೆ. ತೆರಿಗೆ ಬಾಕಿ ಪಾವತಿಸಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಆಸ್ತಿ ಹರಾಜು ಹಾಕುವ ಸಾಧ್ಯತೆಯೂ ಇದೆ.
ಬಿಬಿಎಂಪಿಯು 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 5,210 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಈವರೆಗೆ 4,604 ಕೋಟಿ ರೂಪಾಯಿ ವಸೂಲಿ ಆಗಿದೆ. ಮಾರ್ಚ್ 31ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸದಿದ್ದರೆ ಡಬಲ್ ಹಣ ದಂಡದ ರೂಪದಲ್ಲಿ ವಸೂಲಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.