ಕೊಡಗಿನಲ್ಲಿ‌‌ ನಾಳೆ ಶಾಲಾ-ಕಾಲೇಜು‌ ರಜೆ: ಮಂಜಿನ ನಗರಿಯಲ್ಲಿ‌ ನಿಲ್ಲದ ಮಳೆ

ಹೊಸದಿಗಂತ ವರದಿ , ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಅಲ್ಲಲ್ಲಿ ಭೂಕುಸಿತದ ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ‌ ಧಾರಾಕಾರ ಮಳೆಯಾಗುತ್ತಿರುವುದರಿಂದ ಮತ್ತು ಆರೆಂಜ್ ಅಲರ್ಟ್ ಘೋಷಣೆಯಾಗಿರುವುದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಶುಕ್ರವಾರವೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ಆದೇಶಿಸಿದ್ದಾರೆ.
ಭೂಕುಸಿತ: ಮಡಿಕೇರಿ-ಮಂಗಳೂರು ರಸ್ತೆಯ ಮದೆನಾಡು ಸಮೀಪದ ಎರಡನೇ ಮೊಣ್ಣಂಗೇರಿ ಬಳಿ ಮತ್ತೆ ಭೂ ಕುಸಿತ ಉಂಟಾಗಿದ್ದು, ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು.ಮಣ್ಣು ತೆರವುಗೊಳಿಸಿದ ಬಳಿಕ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಧಾರಾಕಾರ ಮಳೆಯಿಂದ ಚೆಟ್ಟಳ್ಳಿ-ಮಡಿಕೇರಿ ಮಾರ್ಗದ ಕತ್ತಲೆಕಾಡು ಸಮೀಪ ಮರಗಳು ಧರೆಗುರುಳಿದ್ದು, ಕಲ್ಲು ಬಂಡೆಗಳಿಂದ ಕೂಡಿದ ಬರೆ ಕುಸಿದಿದೆ. ರಸ್ತೆ ಸಂಚಾರಕ್ಕೆ ಆಡಚಣೆ ಉಂಟಾಗಿದ್ದು, ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಯಿತು.
ಆದರೆ ಒಂದು ಬದಿಯಿಂದ ತೆಗೆದ ಮಣ್ಣಿನ ರಾಶಿಯನ್ನು ಮತ್ತೊಂದು ಬದಿಗೆ ಸುರಿಯಲಾಗುತ್ತಿದ್ದು, ಜೋರು ಮಳೆಯ ಸಂದರ್ಭ ಇದು ಕುಸಿದು ಅಪಾಯ ಎದುರಾಗಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾಗಮಂಡಲ ಸಮೀಪದ ಕೊಟ್ಟೂರು ಗ್ರಾಮದ ರಾಜು ಎಂಬವರ ಮನೆಯ ಬಳಿ ಬರೆ ಜರೆದಿದ್ದು ಮನೆಯು ಅಪಾಯದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ವಾಸವಿರುವವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 57.06 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ 77.15 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ 42.32 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 51.70 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 39.60, ನಾಪೋಕ್ಲು 55.80, ಸಂಪಾಜೆ 94, ಭಾಗಮಂಡಲ 119.20, ವೀರಾಜಪೇಟೆ ಕಸಬಾ 38.60, ಹುದಿಕೇರಿ 73.90, ಶ್ರೀಮಂಗಲ 44.40, ಪೊನ್ನಂಪೇಟೆ 49, ಅಮ್ಮತ್ತಿ 28, ಬಾಳೆಲೆ 20, ಸೋಮವಾರಪೇಟೆ ಕಸಬಾ 31.40 ಶನಿವಾರಸಂತೆ 50, ಶಾಂತಳ್ಳಿ 117.80, ಕೊಡ್ಲಿಪೇಟೆ 41, ಕುಶಾಲನಗರ 25.80, ಸುಂಟಿಕೊಪ್ಪ 44.20 ಮಿ.ಮೀ. ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು ಗುರುವಾರ ಜಲಾಶಯದ ನೀರಿನ ಮಟ್ಟವನ್ನು 2854.12 ಅಡಿಗಳಿಗೆ ಕಾಯ್ದಿರಿಸಿಕೊಂಡು 15,58 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸಕ್ತ ಜಲಾಶಯಕ್ಕೆ 13,974 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಒಳಹರಿವು 363 ಕ್ಯುಸೆಕ್’ನಷ್ಟಿದ್ದರೆ ಹೊರ ಹರಿವು 80ಕ್ಯುಸೆಕ್’ನಷ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!