ಲೋಕಸಭಾ ಚುನಾವಣೆ 2024 | ನಾಳೆ ಮತದಾನದ ಹಬ್ಬ, ಆಂಟಿಕ್‌ ವಸ್ತುಗಳಿಂದ ಅಲಂಕಾರಗೊಂಡಿದೆ ಈ ಬೂತ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪರೀಕ್ಷೆ ಅನ್ನೋದನ್ನು ಹೇಗೆ ಹಬ್ಬದಂತೆ ಆಚರಿಸಿ ಎಂದು ಹೇಳಲಾಗುತ್ತದೋ ಹಾಗೇ ಚುನಾವಣೆ ಅನ್ನೋದು ಕೂಡ ದೊಡ್ಡ ಪರೀಕ್ಷೆಯೇ, ಇದು ದೇಶದ ಪರೀಕ್ಷೆ. ನಾಳೆ ಲೋಕಸಭಾ ಚುನಾವಣಾ ಹಬ್ಬ ಆರಂಭವಾಗಲಿದ್ದು ಈಗಾಗಲೇ ಎಲ್ಲ ತಯಾರಿ ನಡೆದಿದೆ.

ಯಾವುದೇ ಬೂತ್‌ನಲ್ಲಿ ಮೂಲಸೌಕರ್ಯಗಳ ಕೊರತೆಯಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲಾಗು ತ್ತಿದೆ. ಸಾಮಾನ್ಯವಾಗಿ ವೋಟ್‌ ಮಾಡಲು ಹೋಗುವ ಬೂತ್‌ ನೋಡೋಕೆ ಹೇಗಿರುತ್ತದೆ?
ದೊಡ್ಡ ಖಾಲಿ ರೂಮ್‌, ಅಧಿಕಾರಿಗಳು, ಮತ ಹಾಕುವ ಯಂತ್ರಗಳು ಕಾಣಿಸುತ್ತವೆ. ಆದರೆ ಇಲ್ಲಿರುವ ಬೂತ್‌ಗಳು ತುಂಬಾನೇ ವಿಭಿನ್ನವಾಗಿದೆ. ಹೇಗೆ ವಿಭಿನ್ನ ನೋಡಿ..

ವೋಟ್‌ ಮಾಡಿ ಸೆಲ್ಫಿ ತಗೊಳ್ಳಿ

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನಲ್ಲಿ‌ ಒಟ್ಟು 4 ಮತಗಟ್ಟೆಗಳು ಮಾದರಿ ಮತಗಟ್ಟೆಯಾಗಿ ಆಯ್ಕೆಯಾಗಿದೆ. ಮತಗಟ್ಟೆ ಸಂಖ್ಯೆ 94 ಪೊಂಪೈ ಕಾಲೇಜು ಐಕಳದಲ್ಲಿ ವಿಶೇಷಚೇತನರ ವಿಷಯವಾಗಿ ಮತಗಟ್ಟೆಯಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಪಡುಪಣಂಬೂರು ಗ್ರಾಮ ಪಂಚಾಯತ್ ಕಟ್ಟದ ಕೊಠಡಿ ಸಂಖ್ಯೆ 123 ರಲ್ಲಿ ಯುವ ಜನರನ್ನು ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹಿಸುವಂತೆ ಚಿತ್ರಗಳನ್ನು ಬಿಡಿಸಿ, ಸೆಲ್ಫಿ ಸ್ಟಾಂಡ್ ಗಳನ್ನು ಅಳವಡಿಸಲಾಗಿದೆ. ಯುವ ಮತದಾರರು, ಮೊದಲ ಬಾರಿಗೆ ವೋಟ್‌ ಮಾಡುವವರಿಗೆ ಇಲ್ಲಿ ಸೆಲ್ಫಿ ತೆಗೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇತರರಿಗೂ ವೋಟ್‌ ಮಾಡುವಂತೆ ಪ್ರೇರೇಪಿಸುತ್ತಾರೆ.

ಇದು ಸಾಂಪ್ರದಾಯಿಕ ಮತಗಟ್ಟೆ

ಮತಗಟ್ಟೆ ಸಂಖ್ಯೆ 118 ದ.ಕ.ಜಿ.ಪಂ. ಉನ್ನತೀಕರಿಸಿದ ಮಾದರಿ ಪ್ರಾಥಮಿಕ ಶಾಲೆ ಕೆ. ಎಸ್ . ರಾವ್ ನಗರ ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಸಖೀ ಮತಗಟ್ಟೆಗೆ ಆಯ್ಕೆಯಾಗಿದೆ. ಇನ್ನು ತಾಲೂಕಿನಲ್ಲೇ ವಿಶೇಷವಾಗಿ ಮೂಡಿ ಬಂದಿರುವ ಮತಗಟ್ಟೆ ಎಂದರೆ ಅದು ಕೆಮ್ರಾಲ್ ಗ್ರಾಮ ಪಂಚಾಯತ್ ಕಟ್ಟಡದ ಕೊಠಡಿ ಸಂಖ್ಯೆ 130. ಈ ಮತಗಟ್ಟೆಗೆ ಸಾಂಪ್ರಾದಾಯಿಕ ಮತಗಟ್ಟೆ ಎಂಬ ವಿಷಯವನ್ನು‌ ನೀಡಿದ್ದು, ಹಳೇ ಕಾಲದಲ್ಲಿ ಬಳಸುತ್ತಿದ್ದ‌ ಮಣ್ಣಿನ ಪಾತ್ರೆಗಳು, ಲ್ಯಾಂಪ್ ಗಳು, ಹುಲ್ಲಿನ ಚಾವಣಿ ಇದೆ.



ಮತಗಟ್ಟೆಯೆಲ್ಲ ಹಬ್ಬದ ವಾತಾವರಣ

ಈ ಮತಗಟ್ಟೆಯಲ್ಲಿ ಮಾವಿನ ಎಲೆಯಿಂದ ತೋರಣವನ್ನು ಕಟ್ಟಲಾಗಿದ್ದು, ಒಂದು ಹಳ್ಳಿಯ ಸೊಗಡನ್ನು ಬಿಂಬಿಸುವಂತೆ ಮತಗಟ್ಟೆಯನ್ನು ಅಲಂಕರಿಸಲಾಗಿದೆ. ಜೊತೆಗೆ ಹಬ್ಬದ ವಾತಾವರಣ ಇದ್ದು, ಜನರ ಮನಸ್ಸಿಗೆ ಖುಷಿ ನೀಡುವಂತಿದೆ. ಹೀಗೆ ಇಡೀ ಗ್ರಾಮದ ಬೂತ್ ಒಂದಕ್ಕಿಂತ ಒಂದು ವಿಭಿನ್ನವಾಗಿ ಅಲಂಕಾರಗೊಂಡಿದ್ದು, ಗ್ರಾಮದ ಜನರ ಗಮನ ಸೆಳೆಯುವುದರಲ್ಲಿ ಸಂದೇಹವಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!