ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲಿನಲ್ಲಿ ಟ್ರಾವೆಲ್ ಮಾಡೋದು ಅಂದಾಗ ಮೊದಲು ಕಣ್ಣ ಮುಂದೆ ಬರೋದು ಗಜಿಬಿಜಿ ಜನ ಫುಲ್ ಗದ್ದಲ, ನಡು ನಡುವೆ ಬರುವ ಚಹಾ–ತಿಂಡಿ ಮಾರಾಟಗಾರರು… ಹೀಗೆ ಸಾಮಾನ್ಯವಾಗಿರುತ್ತದೆ. ಆದ್ರೆ ಇಲ್ಲೊಂದು ರೈಲು ಪ್ರಯಾಣಿಕರಿಗೆ ಮಾತ್ರ ಸಿಕ್ಕಿದ್ದು ಅಸಮಾನ್ಯವಾದ ಅನುಭವ. ಹೇಗೆ ಅಂತೀರಾ ಈ ಸ್ಟೋರಿ ಓದಿ.
ಟ್ರೇನ್‌ನಲ್ಲಿ ಟೂತ್‌ಬ್ರಷ್, ಪೇಸ್ಟ್ ಮತ್ತು ಸಾಬೂನು ಮಾರುವ ಈ ಸಾಮಾನ್ಯ ವ್ಯಾಪಾರಿ, ಇಂಗ್ಲಿಷ್ ಸೇರಿ ಬರೋಬ್ಬರಿ 18 ರಿಂದ 19 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಮೂಲಕ ಎಲ್ಲರ ಬೆರಗುಗೊಳಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾನ್ಯ ಮಾರಾಟಗಾರನಲ್ಲ ಎಂಬುದು ಗೊತ್ತಾಗಿದ್ದು ಹೀಗೆ!
ಎಕ್ಸ್‌ನಲ್ಲಿ ಲಕ್ಷ್ಯ ಮೆಹ್ತಾ ಎಂಬವರು ಹಂಚಿಕೊಂಡಿರುವ ವಿಡಿಯೋದಲ್ಲಿ, ರೈಲಿನ ಬೋಗಿಯೊಂದರಲ್ಲಿ ವ್ಯಕ್ತಿಯೊಬ್ಬರು ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಆರಂಭದಲ್ಲಿ ಪ್ರಯಾಣಿಕರಿಗೆ ಇದು ಎಂದಿನಂತೆ ನಡೆಯುವ ವ್ಯಾಪಾರವೇ ಎನಿಸಿತ್ತು. ಆದರೆ ಒಬ್ಬ ಪ್ರಯಾಣಿಕರು ಅವರು ಮಾರುತ್ತಿದ್ದ ಟೂತ್‌ಪೇಸ್ಟ್ ಬಗ್ಗೆ ವಿಚಾರಿಸುತ್ತಿದ್ದಾಗ ಮಾತುಕತೆ ನಿಧಾನವಾಗಿ ಬೇರೆ ದಿಕ್ಕು ಪಡೆದುಕೊಂಡಿದೆ.
ಮಾತಿನ ಮಧ್ಯೆ ಆ ವ್ಯಕ್ತಿಯ ಹಿನ್ನೆಲೆ ಬಗ್ಗೆ ಪ್ರಯಾಣಿಕರು ಪ್ರಶ್ನಿಸಿದಾಗ, ತಾವು ರಾಜಸ್ಥಾನದವರು ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, 18ರಿಂದ 19 ಭಾಷೆಗಳಲ್ಲಿ ಮಾತನಾಡಬಲ್ಲೆ ಎಂದು ಹೇಳಿಕೊಂಡಿದ್ದಾರೆ.
ಹಲವು ಭಾಷೆಗಳಲ್ಲಿ ಮಾತು ಕೇಳಿ ಪ್ರಯಾಣಿಕರು ಫುಲ್ ಶಾಕ್!
ತಮ್ಮ ಮಾತಿಗೆ ಸಾಕ್ಷಿಯೆಂಬಂತೆ ಅವರು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಯಾಣಿಕರೊಂದಿಗೆ ಸಂವಹನ ನಡೆಸಿದ್ದಾರೆ. ವಿವಿಧ ಭಾರತೀಯ ಭಾಷೆಗಳ ನಡುವಿನ ಸಾಮ್ಯತೆಗಳ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ.
ಅವರ ಭಾಷಾ ಜ್ಞಾನದಿಂದ ಕುತೂಹಲಗೊಂಡ ಪ್ರಯಾಣಿಕರು, ಇಷ್ಟೊಂದು ಭಾಷೆಗಳನ್ನು ಹೇಗೆ ಕಲಿತರು ಎಂದು ಪ್ರಶ್ನಿಸಿದ್ದಾರೆ. ನಿರಂತರವಾಗಿ ಜನರೊಂದಿಗೆ ಬೆರೆಯುವುದು, ಕೇಳುವುದು ಮತ್ತು ಕಲಿಯುವ ಆಸಕ್ತಿಯೇ ತಮ್ಮ ಭಾಷಾ ಜ್ಞಾನವನ್ನು ಬೆಳೆಸಲು ನೆರವಾಗಿದೆ ಎಂಬ ರೀತಿಯಲ್ಲಿ ಅವರು ವಿವರಿಸಿದ್ದಾರೆ.
ವ್ಯಾಪಾರಕ್ಕಿಂತ ಭಾಷೆಯೇ ಪ್ರಮುಖವಾಯಿತು!
ಟೂತ್‌ಪೇಸ್ಟ್ ಮತ್ತು ಸೋಪ್ ಮಾರಾಟದಿಂದ ಆರಂಭವಾದ ಮಾತುಕತೆ ಕೊನೆಗೆ ಭಾಷೆಗಳ ಕುರಿತ ಚರ್ಚೆಯಾಗಿ ಬದಲಾಗಿದೆ. ಪ್ರಯಾಣಿಕರು ಅವರ ಭಾಷಾ ಕೌಶಲ್ಯವನ್ನು ಆಸಕ್ತಿಯಿಂದ ಆಲಿಸಿದ್ದು, ರೈಲಿನಲ್ಲಿದ್ದ ಸಾಮಾನ್ಯ ಕ್ಷಣವೊಂದು ವಿಶೇಷ ಅನುಭವವಾಗಿ ಮಾರ್ಪಟ್ಟಿದ್ದು ಸುಳ್ಳಲ್ಲ.
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ
ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಈ ವ್ಯಕ್ತಿಯ ಕಲಿಯುವ ಆಸಕ್ತಿ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿದ್ದಾರೆ. ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಲೇ ಹೊಸ ಭಾಷೆಗಳನ್ನು ಕಲಿಯುತ್ತಿರುವುದು ಹಲವರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪದವಿ, ದೊಡ್ಡ ಹುದ್ದೆ ಅಥವಾ ವಿಶೇಷ ವೇದಿಕೆ ಇಲ್ಲದಿದ್ದರೂ ಪ್ರತಿಭೆ ಯಾರಲ್ಲಾದರೂ ಇರಬಹುದು ಎಂಬುದಕ್ಕೆ ಈ ರೈಲು ಮಾರಾಟಗಾರನ ಕಥೆ ಮತ್ತೊಂದು ಉದಾಹರಣೆಯಾಗಿದೆ. ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಬೀಳುವ ವ್ಯಕ್ತಿಗಳಲ್ಲೇ ಇಂತಹ ಅಸಾಮಾನ್ಯ ಪ್ರತಿಭೆಗಳು ಅಡಗಿರಬಹುದು ಎಂಬುದನ್ನು ಈ ವೈರಲ್ ವಿಡಿಯೋ ಮತ್ತೊಮ್ಮೆ ನೆನಪಿಸಿದೆ.



