ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ತಾಲೂಕಿನ ಮಲೆ ಗ್ರಾಮದಲ್ಲಿ ಕೆರೆಗೆ ಈಜಲು ತೆರಳಿದ್ದ ಒಂದೇ ಗ್ರಾಮದ ಮೂವರು 12 ವರ್ಷದ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ರಜೆಯ ಖುಷಿಯಲ್ಲಿದ್ದ ಮಕ್ಕಳ ಕುಟುಂಬಗಳಿಗೆ ಕ್ಷಣಾರ್ಧದಲ್ಲಿ ಬರಸಿಡಿಲು ಬಡಿದಂತಾಗಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಒಂದೇ ಗ್ರಾಮದ ಸ್ನೇಹಿತರು
ಮೃತರನ್ನು 12 ವರ್ಷದ ತರುಣ್, ಭುವನ್ ಹಾಗೂ ಲಿಖಿತ್ ಎಂದು ಗುರುತಿಸಲಾಗಿದೆ. ಮೂವರೂ ಒಂದೇ ಗ್ರಾಮದವರಾಗಿದ್ದು, ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಬೇರೆ ಬೇರೆ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ದಸರಾ ರಜೆ ಹಿನ್ನೆಲೆಯಲ್ಲಿ ಮೂವರು ಸ್ನೇಹಿತರು ಕೆರೆಯ ಬಳಿ ತೆರಳಿ ಈಜಲು ಮುಂದಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ:
ಆಳದ ಅರಿವಿಲ್ಲದೆ ದುರಂತ
ಕೆರೆಯ ಕಟ್ಟೆಯ ಸಮೀಪದಲ್ಲಿ ಮಹಿಳೆಯರು ಬಟ್ಟೆ ಹಾಗೂ ಪಾತ್ರೆಗಳನ್ನು ತೊಳೆಯಲು ಬಳಸುವ ಪ್ರದೇಶದಲ್ಲಿ ಮಕ್ಕಳು ನೀರಿಗೆ ಇಳಿದಿದ್ದರು. ಈ ವೇಳೆ ಕೆರೆಯೊಳಗಿದ್ದ ಆಳವಾದ ಗುಂಡಿಯ ಬಗ್ಗೆ ಅರಿವಿಲ್ಲದೆ ಅದರತ್ತ ತೆರಳಿದ್ದಾರೆ. ಈಜುತ್ತಿದ್ದ ಸಂದರ್ಭ ಆಳವಾದ ನೀರಿನಲ್ಲಿ ಸಿಲುಕಿದ ಪರಿಣಾಮ ಮೂವರೂ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ನಡೆದಿದ್ದು, ಇದರಿಂದ ಕೆಲವು ಭಾಗಗಳಲ್ಲಿ ನೀರಿನ ಆಳ ಹೆಚ್ಚಾಗಿತ್ತು ಎನ್ನಲಾಗಿದೆ. ಈ ಬದಲಾವಣೆಯ ಬಗ್ಗೆ ಅರಿವಿಲ್ಲದ ಮಕ್ಕಳು ಈಜಲು ತೆರಳಿದ್ದೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಘಟನೆಯ ನಿಖರ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಕ್ಕಳು ನೀರಿನಲ್ಲಿ ಮುಳುಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೆರೆಯತ್ತ ಧಾವಿಸಿದರು. ಬಳಿಕ ಮೃತದೇಹಗಳು ಪತ್ತೆಯಾಗುತ್ತಿದ್ದಂತೆ ಸ್ಥಳದಲ್ಲಿ ಆಕ್ರಂದನ ಮುಗಿಲುಮುಟ್ಟಿತು. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ರೋದನ ಮನಕಲಕುವಂತಿತ್ತು. ಒಂದೇ ಗ್ರಾಮದ ಮೂವರು ಬಾಲಕರನ್ನು ಏಕಕಾಲದಲ್ಲಿ ಕಳೆದುಕೊಂಡ ನೋವು ಇಡೀ ಗ್ರಾಮಕ್ಕೆ ಆಘಾತ ತಂದಿದೆ.



