ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಾಗಲೂರು ಕ್ರಾಸ್‌ನ ಅಮೇಝಾನ್ ಕಚೇರಿಯ ಹೊರಭಾಗದ ಫುಟ್‌ಪಾತ್‌ನಲ್ಲಿ ಅಳವಡಿಸಲಾಗಿದ್ದ ಟ್ರಾನ್ಸ್‌ಫಾರ್ಮರ್ ಬಾಕ್ಸ್‌ವೊಂದು ಸ್ಫೋಟಗೊಂಡಿದೆ.
ಇಂದು ಬೆಳಗ್ಗೆ ತೀವ್ರ ಸ್ವರೂಪದ ಸ್ಫೋಟ ಸಂಭವಿಸಿದ್ದು, ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ವ್ಯಕ್ತಿ ನೆಲಕ್ಕೆ ಬಿದ್ದಿದ್ದು, ಗಾಯಗಳಾಗಿವೆ. ಕೈಗೆ ಸುಟ್ಟ ಗಾಯಗಳಾಗಿವೆ. ಮತ್ತೊಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನ ಶಾಕ್‌ನಲ್ಲಿದ್ದಾರೆ. ಅಮೆಜಾನ್ ಕಚೇರಿ ಆವರಣದ ಗೇಟ್ ನಂ. 3ರ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡವರನ್ನು ಮೊಹಮ್ಮದ್ ಅಫ್ರೋಜ್ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಮಿಥುನ್ ಕುಮಾರ್ ಸತೇಡ್, ಇದು ಅಮೆಜಾನ್ ಕಚೇರಿಯ ಗೇಟ್ ನಂ. 3ರ ಬಳಿ ನಡೆದಿದೆ. ಬಾಗಲೂರು ಕ್ರಾಸ್ ಸಮೀಪ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ಅಫ್ರೋಜ್ ಗಾಯಗೊಂಡಿದ್ದಾರೆ. ಅವರು ಸುರಕ್ಷಿತವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹಠಾತ್ ಸಂಭವಿಸಿದ ಸ್ಫೋಟದ ದೃಶ್ಯವು ಘಟನೆಯನ್ನು ಕಣ್ಣಾರೆ ಕಂಡ ಅರುಣ್ ಜಿ ಅವರ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ನನ್ನ ಡ್ಯಾಶ್‌ಕ್ಯಾಮ್‌ನಲ್ಲಿ ಘಟನೆ ಸೆರೆಯಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ನಾನು ಕಾರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ನನ್ನ ಮಕ್ಕಳು ಕಾರಿನೊಳಗಿದ್ದರು ಎಂದು ಅರುಣ್ ಜಿ ತಿಳಿಸಿದ್ದಾರೆ. ವಿದ್ಯುತ್ ದೋಷಕ್ಕೆ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಓಡಾಡುತ್ತಾರೆ. ಆದರೆ ಈ ರೀತಿ ಟ್ರಾನ್ಸ್‌ಫಾರ್ಮರ್ ಸುರಕ್ಷತೆ ಇಲ್ಲ ಎಂದರೆ ಆತಂಕವಾಗುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.



