October 23, 2026
Friday, October 23, 2026
spot_img

ದೊಡ್ಡಬಳ್ಳಾಪುರದಲ್ಲಿ ಭೂಮಿ ಕಂಪಿಸಿದ ಅನುಭವ : ರಿಕ್ಟರ್‌ ಮಾಪಕದಲ್ಲಿ 3.0 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇಂದು ಬೆಳಗ್ಗೆ ಭೂಕಂಪನ ಸಂಭವಿಸಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.0 ರಷ್ಟು ತೀವ್ರತೆ ದಾಖಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮೋಜನಹಳ್ಳಿ ಗ್ರಾಮದಿಂದ ಉತ್ತರಕ್ಕೆ ಸುಮಾರು 0.5 ಕಿ.ಮೀ ದೂರದಲ್ಲಿ ಹಾಗೂ ಭೂಮಿಯ ಆಳದಲ್ಲಿ 10 ಕಿ.ಮೀ ಪ್ರದೇಶದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಭೂಕಂಪದ ತೀವ್ರತೆ ಕಡಿಮೆ ಇರುವ ಕಾರಣ ಯಾವುದೇ ರೀತಿಯ ಹಾನಿ ಆಗಿಲ್ಲ. ಭೂಕಂಪನದ ಕೇಂದ್ರಬಿಂದುವಿನಿಂದ 20 ರಿಂದ 30 ಕಿ.ಮೀ ಸುತ್ತಳತೆ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕಂಪನ ಅಥವಾ ಕಂಪನಗಳ ಅನುಭವವಾಗಿರಬಹುದು. ಈ ರೀತಿಯ ಭೂಕಂಪನದಿಂದ ಸ್ಥಳೀಯ ಸಾರ್ವಜನಿಕರಿಗೆ ಅಥವಾ ಆಸ್ತಿಪಾಸ್ತಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಇದು ಸೆಸ್ಮಿಕ್‌ ಝೋನ್‌ II ವ್ಯಾಪ್ತಿಗೆ ಬರಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಇಲಾಖೆ ಹೇಳಿದೆ.

Must Read