ಭೀಕರ ಭಯೋತ್ಪಾದಕ ದಾಳಿಗೆ 42 ಸೈನಿಕರು ಬಲಿ, 22 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮಾಲಿಯ ಪ್ರಕ್ಷುಬ್ಧ ಕೇಂದ್ರ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ 42 ಸೈನಿಕರು ಸಾವನ್ನಪ್ಪಿ, 22 ಸೈನಿಕರು ಗಾಯಗೊಂಡಿದ್ದಾರೆ ಎಂದು ದೇಶದ ಮಿಲಿಟರಿ ಸರ್ಕಾರ ಹೇಳಿದೆ.
ಗಾವೊ ಪ್ರದೇಶದ ಟೆಸಿಟ್ ಪಟ್ಟಣದಲ್ಲಿ ನಡೆದ ದಾಳಿಯು ಈ ಪ್ರದೇಶದಲ್ಲಿ ಸಶಸ್ತ್ರ ಸಜ್ಜಿತ ಉಗ್ರ ಗುಂಪುಗಳ ವಿರುದ್ಧ ಹೋರಾಡುತ್ತಿರುವ ಮಾಲಿಯ ಭದ್ರತಾ ಪಡೆಗಳ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಮಾರಕ ದಾಳಿಯಾಗಿದೆ.
ದಾಳಿಯಲ್ಲಿ ಕನಿಷ್ಠ ನಾಲ್ವರು ನಾಗರಿಕರು ಸಹ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಟೆಸಿಟ್‌ನ ಮಾಲಿಯನ್ ಸೇನಾ ಘಟಕಗಳ ಮೇಲೆ ಸಶಸ್ತ್ರ ಭಯೋತ್ಪಾದಕ ಗುಂಪುಗಳು ಪ್ರಭಲವಾಗಿ ದಾಳಿ ನಡೆಸಿದವು. ಗ್ರೇಟರ್ ಸಹಾರಾದಲ್ಲಿ ಇಸ್ಲಾಮಿಕ್ ಸ್ಟೇಟ್‌ ನಡೆಸಿದೆ ಎನ್ನಲಾದ ಈ ದಾಳಿಯಲ್ಲಿ ಡ್ರೋನ್‌ಗಳು, ಸ್ಫೋಟಕಗಳು, ಕಾರ್ ಬಾಂಬ್‌ಗಳು ಮತ್ತು ಫಿರಂಗಿಗಳನ್ನು ಬಳಸಿ ಸಂಘಟಿತವಾಗಿ ದಾಳಿ ನಡೆಸಲಾಗಿದೆ ಎಂದು ಸರ್ಕಾರದ ಮೂಲಕಗಳು ಹೇಳಿಕೆ ನೀಡಿವೆ.
ʼʼಭಯೋತ್ಪಾದಕರು ಹೊರಗಿನ ʼಪರಿಣಿತರಿಂದʼ ಬೆಂಬಲವನ್ನು ಪಡೆದಿರುವುದು ನಿಸ್ಸಂದೇಹ” ಎಂದು ಸರ್ಕಾರ ಆರೋಪಿಸಿದೆ. ಕಳೆದ  ಒಂದು ದಶಕದಿಂದ ಮಾಲಿಯಲ್ಲಿ ಹಿಂಸಾಚಾರ ಅವ್ಯಾಹತವಾಗಿ ನಡೆಯುತ್ತಿದೆ. 2012 ರಲ್ಲಿ ಜನಾಂಗೀಯ ಟುವಾರೆಗ್ ಪ್ರತ್ಯೇಕತಾವಾದಿಗಳು ದೇಶದ ಉತ್ತರ ಭಾಗದ ಮೇಲೆ ಹಿಡಿತ ಸಾಧಿಸಿದಾಗ ಬಿಕ್ಕಟ್ಟು ಉಂಟಾಯಿತು. ಆ ದಂಗೆಯನ್ನು ಸಶಸ್ತ್ರ ಗುಂಪುಗಳು ಹೈಜಾಕ್ ಮಾಡಿದ್ದು, ಇತ್ತೀಚಿನ ವರ್ಷಗಳಲ್ಲಿ ಬುರ್ಕಿನಾ ಫಾಸೊ ಮತ್ತು ನೈಜರ್‌ನ ಗಡಿಯಲ್ಲಿರುವ ದೇಶದ ವಿಸ್ತಾರವಾದ ಕೇಂದ್ರ ಪ್ರದೇಶದಲ್ಲಿ ದಂಗೆಗಳು ಭುಗಿಲೆದ್ದಿವೆ. ಐಎಸ್‌ಐಎಲ್ ಮತ್ತು ಅಲ್-ಖೈದಾ ಶಾಖೆಗಳು ಈ ಬಾಗದಲ್ಲಿ ಕೋಮು ಉದ್ವಿಗ್ನತೆಯನ್ನು ಹುಟ್ಟುಹಾಕುತ್ತಿವೆ.
2020 ರಲ್ಲಿ ದಂಗೆ ನಡೆಸಿ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ಅಧಿಕಾರವನ್ನು ಪಡೆದ ಮಾಲಿಯ ಮಿಲಿಟರಿ ಸರ್ಕಾರವು ದೇಶದಲ್ಲಿ ನಡೆಯುತ್ತಿರುವ ದಾಳಿಗಳನ್ನು ತಡಎಗಟ್ಟುವಲ್ಲಿ ಅಸಮರ್ಥತೆಯನ್ನು  ಪ್ರದರ್ಶಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!