July 11, 2026
Saturday, July 11, 2026
spot_img

2027ರ ಡಿಸೆಂಬರ್‌ಗೆ ತುಮಕೂರು–ರಾಯದುರ್ಗ ರೈಲು ಸಂಚಾರ ಆರಂಭ: ಸೋಮಣ್ಣ ಘೋಷಣೆ

ಹೊಸದಿಗಂತ ವರದಿ ತುಮಕೂರು:

2.500 ಸಾವಿರ ಕೋಟಿ.ರೂ ವೆಚ್ಚದ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಡಿಸೆಂಬರ್-2027ಕ್ಕೆ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಹೊರಹೊಲಯದ ಬೈಪಾಸ್ ಬಳಿ ರೈಲ್ವೆ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸುಮಾರು 20 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ತುಮಕೂರು-ರಾಯದುರ್ಗ ರೈಲು ಮಾರ್ಗ ಎರಡು ವರ್ಷಗಳಿಂದ ವೇಗದ ಚಾಲನೆ ಪಡೆದುಕೊಂಡಿದೆ. ಇಂದು ತುಮಕೂರಿನಿಂದ-ಪಾವಗಡದವರೆಗೆ ನಾಲ್ಕು ರೈಲ್ವೆ ನಿಲ್ದಾಣಗಳ ಶಂಕುಸ್ಥಾಪನೆ ಕಾರ್ಯ ನೆರವೇರಲಿದೆ. ಕೊರಟಗೆರೆಯಲ್ಲಿ ಊರುಕೆರೆ ಮತ್ತು ಕೊರಟಗೆರೆ ಮಾರ್ಗದ 18 ಕಿ.ಮೀ ಕಾಮಗಾರಿಗೆ ಚಾಲನೆ ದೊರೆತಿದ್ದು ಇದು ಪಾವಗಡದವೆರೆಗೆ ಮುಂದುವರೆಯಲಿದೆ, ಒಟ್ಟು 207 ಕಿ.ಮೀ ವ್ಯಾಪ್ತಿಯ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗದಲ್ಲಿ 137 ಕಿ.ಮೀ ಮಾರ್ಗವು ಪೂರ್ಣಗೊಂಡಿದ್ದು, ಇನ್ನು 80 ಕಿ.ಮೀ ರೈಲ್ವೆ ಮಾರ್ಗವು ಪೂರ್ಣಗೊಳ್ಳಬೇಕಿದೆ ಇದಕ್ಕೆ ನಮ್ಮ ಪ್ರಧಾನಮಂತ್ರಿ ನರೇಂದ್ರಮೋದಿಯವರ ದೂರದೃಷ್ಠಿ ಮತ್ತು ಅಭಿವೃದ್ಧಿ ಮನಸ್ಥಿತಿ ಮುಖ್ಯ ಕಾರಣವಾಗಿದೆ ಎಂದರು.

ಪ್ರಸ್ತುತ ತುಮಕೂರಿನಿಂದ-ದಾವಣಗೆರೆ ನೂತನ ರೈಲು ಮಾರ್ಗ ಆಗುತ್ತಿದ್ದು ಸುಮಾರು 60 ಕಿ.ಮೀ ಪ್ರಯಾಣವು ಜನರಿಗೆ ಕಡಿಮೆಯಾಗಲಿದೆ. ಇದರೊಂದಿಗೆ ಜಿಲ್ಲೆಯ ಶಿರಾ ನಗರ ದಿಂದ ಬಡವನಹಳ್ಳಿ ಮೂಲಕ ಚಿಕ್ಕಬಳ್ಳಾಪುರ ನಗರಕ್ಕೆ 650 ಕೋಟಿ.ರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯು ಪೂರ್ಣಗೊಳ್ಳುತ್ತಿದ್ದು, ಅದೇ ರೀತಿ ನೆಲಮಂಗಲ ತಾಲೂಕಿನ ದಾಬಸ್‍ಪೇಟೆ ಯಿಂದ ಕೊರಟಗೆರೆ, ಮಧುಗಿರಿ, ಪಾವಗಡ ಮೂಲಕ ಕಲ್ಯಾಣದುರ್ಗಕ್ಕೆ ನೂತನವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಾರಂಭಿಸಲಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗದಿದ್ದರೆ ಅಭಿವೃದ್ಧಿಗೆ ಕುಂಠಿತವಾಗುತ್ತದೆ ಎಂದರು.

ಸಂವಿಧಾನದಂತೆ ನಡೆಯಬೇಕು

ಬಾಬಾ ಸಾಹೇಬರ ಸಂವಿಧಾನದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಮ್ಮದೇ ಆದ ಕರ್ತವ್ಯಗಳಿವೆ. ಅದನ್ನು ಮೀರಿ ಹೊರ ದೇಶದವರಿಗೆ ಕಳ್ಳತನದಿಂದ ಪೌರತ್ವ ನೀಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ. ಕೇಂದ್ರ ಸರ್ಕಾರದ ಎಸ್‍ಐಆರ್ ನೀತಿಯನ್ನು ರಾಜ್ಯ ಸರ್ಕಾರಗಳು ತಪ್ಪು ದಾರಿ ಹಿಡಿದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ, ಇದನ್ನು ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಎನ್‍ಡಿಎ ಮುಖಂಡರ ಮೇಲೆ ಬೇಸರ:

ಕಾರ್ಯಕ್ರಮದಲ್ಲಿ ಬೆರಳಣಿಕೆಯ ಜನರು ಭಾಗವಹಿಸಿದ್ದನ್ನು ಕಂಡು ಕೇಂದ್ರ ಸಚಿವ ವಿ.ಸೋಮಣ್ಣ ಎನ್‍ಡಿಎ ಮುಖಂಡರ ಮೇಲೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:

2.500 ಕೋಟಿ.ರೂ ವೆಚ್ಚದ ಕಾಮಗಾರಿ ಚಾಲನೆಗೆ ಜನರೇ ಬರದಿದ್ದರೇ ಹೇಗೆ, ಮುಖಂಡರಾದ ನೀವುಗಳು ಏನು ಮಾಡುತ್ತೀರಾ? ಇನ್ನು ಮುಂದೆಯಾದರೂ ಒಗ್ಗಾಟ್ಟಾಗಿ ಕೆಲಸ ಮಾಡಿ ನಮ್ಮ ಕೆಲಸಗಳು ಜನರಿಗೆ ತಲುಪದಿದ್ದರೆ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ತಪ್ಪು ಸಂದೇಶ ಹೋಗುತ್ತದೆ ಎಂದು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಕಾರ್ಯಕ್ರಮದಲ್ಲಿ ಮುಖಂಡರದ್ದೇ ದರ್ಬಾರ್:

ಕೇಂದ್ರ ಸರ್ಕಾರದ ಈ ಸರ್ಕಾರಿ ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆಯ ಒಬ್ಬ ಅಧಿಕಾರಿ ಮತ್ತು ಗುತ್ತಿಗೆದಾರ ವೇದಿಕೆಯ ಆಸನದಲ್ಲಿ ಇದ್ದಿದ್ದು ಬಿಟ್ಟರೆ ಉಳಿದ ಎಲ್ಲಾ ಆಸನಗಳು ಮುಖಂಡರೇ ತುಂಬಿಕೊಂಡಿದ್ದರು, ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಮತ್ತು ವಿಭಾಗೀಯ ಮಟ್ಟದ ಅಧಿಕಾರಿಗಳು ಹೊರಗೆ ಬಿಸಿಲಿನಲ್ಲಿ ನಿಂತು ನೋಡುತ್ತಿದ್ದರು, ಕನಿಷ್ಟ ಸೌಜನ್ಯಕ್ಕೂ ಅವರನ್ನು ವೇದಿಕೆ ಕಾರ್ಯಕ್ರಮಕ್ಕೆ ಕರೆಯಲಿಲ್ಲ, ಕಾರ್ಯಕ್ರಮ ಕೊನೆಯಲ್ಲಿ ಇವರನ್ನು ನೋಡಿದ ಕೇಂದ್ರ ಸಚಿವರು ಧನ್ಯವಾದ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿ ಪ್ರಸಾದ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದರ್ಶನ್ ಕೆ.ಎಲ್, ಮುಖಂಡ ಅನಿಲ್‍ಕುಮಾರ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಬಿಜೆಪಿ ಅಧ್ಯಕ್ಷ ರುದ್ರೇಶ್, ಮಾಜಿ ಅಧ್ಯಕ್ಷ ಪವನ್‍ಕುಮಾರ್, ನರಸಿಂಹರಾಜು, ಲಕ್ಷ್ಮಣ್, ಕೆ.ಎನ್. ಲಕ್ಷ್ಮೀನಾರಾಯಣ್ ಸೇರಿದಂತೆ ಇತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !