May 19, 2026
Tuesday, May 19, 2026
spot_img

ಗಿನ್ನಿಸ್ ವಿಶ್ವದಾಖಲೆಗೆ ತುಮಕೂರಿನ ಸಾಧನಾ ಸಮಾವೇಶ: ಬರೋಬ್ಬರಿ 21 ಸಾವಿರಕ್ಕೂ ಹೆಚ್ಚು ಹಕ್ಕುಪತ್ರ ಅಪ್‌ಲೋಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ತುಮಕೂರಿನಲ್ಲಿ ಇಂದು ನಡೆದ ಸಾಧನಾ ಸಮರ್ಪಣಾ ಸಮಾವೇಶದಲ್ಲಿ ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು, ಇದೇ ವೇಳೆ ತುಮಕೂರು ಜಿಲ್ಲೆ ಗಿನ್ನಿಸ್ ವಿಶ್ವದಾಖಲೆ ಸಾಧಿಸಿ ಗಮನ ಸೆಳೆಯಿತು.

ಜಿಲ್ಲೆಯಲ್ಲಿ 21,529 ಹಕ್ಕುಪತ್ರಗಳನ್ನು ಯಶಸ್ವಿಯಾಗಿ ಅಪ್‌ಲೋಡ್ ಮಾಡಿರುವ ಸಾಧನೆಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು.

ಗಿನ್ನಿಸ್ ಪ್ರಮಾಣಪತ್ರ ಸ್ವೀಕರಿಸಿದ ಸಿಎಂ

ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಮಾಣಪತ್ರ ನೀಡಿದರು. ಬಳಿಕ ಮುಖ್ಯಮಂತ್ರಿ ಅವರು ಅದನ್ನು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಹಸ್ತಾಂತರಿಸಿದರು. ಸಮಾರಂಭದಲ್ಲಿ ೧.೫೨ ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿವಿಧ ಹಕ್ಕುಪತ್ರಗಳನ್ನು ವಿತರಿಸಲಾಯಿತು.

ತುಮಕೂರು ಅಭಿವೃದ್ಧಿಗೆ ಸರ್ಕಾರದ ಒತ್ತು

ಸಮಾವೇಶದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತುಮಕೂರನ್ನು ಎರಡನೇ ಬೆಂಗಳೂರು ಆಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಬೆಂಗಳೂರು ನಗರದ ಸಂಚಾರ ದಟ್ಟಣೆ ಹಾಗೂ ನಗರೀಕರಣದ ಒತ್ತಡ ಕಡಿಮೆ ಮಾಡಲು ತುಮಕೂರಿನ ಅಭಿವೃದ್ಧಿ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಗಳ ಪರಿಣಾಮ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿ ಬಲಪಡಿಸಲು ಸಹಕಾರಿಯಾಗಿವೆ ಎಂದು ಶಿವಕುಮಾರ್ ತಿಳಿಸಿದರು. ಈ ಕುರಿತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲೂ ಗ್ಯಾರಂಟಿ ಯೋಜನೆಗಳ ಸಕಾರಾತ್ಮಕ ಪರಿಣಾಮ ಬೆಳಕಿಗೆ ಬಂದಿದೆ ಎಂದು ಹೇಳಿದರು. ತುಮಕೂರು ಭಾಗಕ್ಕೆ ಜೂನ್ ಅಥವಾ ಜುಲೈ ವೇಳೆಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ ಎಂದು ಕೂಡಾ ಅವರು ಘೋಷಿಸಿದರು. ಈ ಯೋಜನೆಯಿಂದ ಜಿಲ್ಲೆಯ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೆರವಾಗಲಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !