ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಟ್ವಿಸ್ಟ್: ವಿಡಿಯೋ ಲೀಕ್‌ ಹಿಂದೆ ಇರೋದು ಡಿಕೆಶಿ ಎಂದ ದೇವರಾಜೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಸೂತ್ರಧಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಆಮಿಷವೊಡ್ಡಿದ ಸಂಭಾಷಣೆಯ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ.ಜತೆಗೆ ತಮಗೆ ಎಸ್‌ಐಟಿ ಮೇಲೆ ಯಾವುದೇ ನಂಬಿಕೆ ಇಲ್ಲ. ಹೀಗಾಗಿ ಈ ಎಲ್ಲ ಸಾಕ್ಷಿಗಳನ್ನು ನೇರವಾಗಿ ಸಿಬಿಐಗೆ ನೀಡುವುದಾಗಿ ಹೇಳಿದ್ದಾರೆ.

ಮೊದಲು ನನಗೆ ಎಲ್.ಆರ್ ಶಿವರಾಮ್ ಗೌಡ ಕರೆ ಮಾಡಿದರು. ಬಳಿಕ ಅವರು ಪಕ್ಕದಲ್ಲಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಕೈಗೆ ಕೊಡುತ್ತಾರೆ ಎಂದು ಹೇಳುತ್ತಾ ಅದರ ಆಡಿಯೊವನ್ನು ಅರ್ಧ ಪ್ಲೇ ಮಾಡಿದರು. ಡಿಕೆಶಿ ಅವರ ಧ್ವನಿಯುಳ್ಳ ಮಾತು ಆರಂಭವಾಗುತ್ತಿದ್ದಂತೆ ಅದನ್ನು ಆಫ್‌ ಮಾಡಿದರು. ಹೀಗಾಗಿ ಪೂರ್ಣ ಆಡಿಯೊವನ್ನು ಬಿಡುಗಡೆ ಮಾಡಿ ಎಂದು ಮಾಧ್ಯಮದವರು ಆಗ್ರಹಿಸಿದರು. ಆದರೆ, ಅದಕ್ಕೆ ದೇವರಾಜೇಗೌಡರು ಒಪ್ಪಲಿಲ್ಲ. ನಾನಿದನ್ನು ಸಿಬಿಐಗೆ ಸಾಕ್ಷಿಯಾಗಿ ಕೊಡುತ್ತೇನೆ ಎಂದು ಹೇಳಿದರು.

ಪೆನ್ ಡ್ರೈವ್ ಕಥಾನಾಯಕರೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಿದ್ದಾರೆ. ನನಗೆ ಬಹಳ ದೊಡ್ಡ ಮಟ್ಟದ ಆಫರ್ ಬಂತು. ಕ್ಯಾಬಿನೆಟ್ ರ‍್ಯಾಂಕ್‌ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟರು. ಪೆನ್‌ಡ್ರೈವ್‌ ಹೇಗೆ ರೆಡಿ ಆಯಿತು ಹೊಳೆನರಸೀಪುರಕ್ಕೆ ಹೇಗೆ‌‌ ಹೋಯಿತು? ಶ್ರೇಯಸ್‌ಗೆ‌ ಏನೆಲ್ಲಾ ಡೈರೆಕ್ಷನ್ ಇತ್ತು? ಎಲ್ಲವೂ ನನಗೆ ಗೊತ್ತು ಎಂದು ದೇವರಾಜೇಗೌಡ ಹೇಳಿದರು.

ಸರ್ಕಾರದ ಪರ ಎಸ್‌ಐಟಿ ಕೆಲಸ
ಎಸ್‌ಐಟಿ ಟೀಂ ರಾಜ್ಯ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧವಾಗಿ ನಾನು ಎಸ್‌ಐಟಿಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಿರಿ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದು ಎಸ್‌ಐಟಿ ತನಿಖಾ ತಂಡದಲ್ಲಿರುವ ಮಹಿಳಾ ಎಸ್‌ಪಿ ನನಗೆ ತಾಕೀತು ಮಾಡಿದ್ದರು. ಹೀಗಾಗಿ ಎಸ್‌ಐಟಿ ಬಗ್ಗೆ ನನಗೆ ನಂಬಿಕೆಯೇ ಇಲ್ಲ ಎಂದು ದೇವರಾಜೇಗೌಡ ಕಿಡಿಕಾರಿದರು.

ಇನ್ನು ಮಾಜಿ ಸಚಿವ ಎಲ್‌.ಆರ್.‌ ಶಿವರಾಮೇಗೌಡ ಕರೆ ಮಾಡಿ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಹೆಸರನ್ನು ಹೇಳಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ಆರೋಪ ಮಾಡಿದ ದೇವರಾಜೇಗೌಡ ಅವರು, ಅದಕ್ಕೆ ಸಂಬಂಧಪಟ್ಟ ಆಡಿಯೊವನ್ನು ಬಿಡುಗಡೆ ಮಾಡಿದರು.

ಈ ಪ್ರಕರಣದಲ್ಲಿ ಎಲ್‌.ಆರ್.‌ ಶಿವರಾಮೇಗೌಡ ಮಧ್ಯವರ್ತಿಯಾಗಿದ್ದಾರೆ. ಡಿ.ಕೆ. ಶಿವಕುಮಾರ್‌ ಪರವಾಗಿ ಕೆಲಸ ಮಾಡಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!