ಭಾರತದಲ್ಲಿ ಖಲಿಸ್ತಾನಿ ಬೆಂಬಲಿಗರ ಟ್ವಿಟ್ಟರ್ ಖಾತೆಗಳು ಬ್ಲಾಕ್ : ಕೇಂದ್ರ ಸರ್ಕಾರದಿಂದ ಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಪರಾರಿಯಾಗಿರುವ ತೀವ್ರಗಾಮಿ ಸಿಖ್ ಬೋಧಕ ಮತ್ತು ಖಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ಪತ್ತೆಗಾಗಿ ಪಂಜಾಬ್​ ಪೊಲೀಸರು 4ನೇ ದಿನವೂ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇದನ್ನು ವಿರೋಧಿಸಿ ವಿದೇಶಗಳಲ್ಲಿ ಭಾರತದ ಕಚೇರಿಗಳ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಭಾರತದಲ್ಲಿ ಬಹುತೇಕ ಖಲಿಸ್ತಾನಿ ಬೆಂಬಲಿಗರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಿದೆ. ವಿಶೇಷವೆಂದರೆ ಕೆನಡಾ ಸಂಸದ ಹಾಗೂ ನ್ಯೂ ಡೆಮಾಕ್ರೆಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಅವರ ಖಾತೆಯೂ ಸೇರಿದೆ.

ಕೆನಡಾದ ಸಂಸದರ ಹೊರತಾಗಿಯೂ ಈ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕೆನಡಾದ ಕವಯಿತ್ರಿ ರೂಪಿ ಕೌರ್, ಸ್ವಯಂಸೇವಾ ಸಂಸ್ಥೆ ಯುನೈಟೆಡ್ ಸಿಖ್ಸ್ ಮತ್ತು ಕೆನಡಾ ಮೂಲದ ಕಾರ್ಯಕರ್ತ ಗುರುದೀಪ್ ಸಿಂಗ್ ಸಹೋಟಾ ಅವರ ಟ್ವಿಟರ್ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ. ಭಾರತ ವಿರೋಧಿ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಜಗ್ಮೀತ್ ಸಿಂಗ್ ಖಾತೆಯನ್ನು ನಿರ್ಬಂಧಿಸಿರುವುದು ಗಮನಾರ್ಹವಾಗಿದೆ.

ಭಾನುವಾರದಂದು ಖಾಲಿಸ್ತಾನಿ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮೇಲೆ ದಾಳಿ ಮಾಡಿ ತ್ರಿವರ್ಣ ಧ್ವಜವನ್ನು ಕೆಳಗೆ ಎಳೆದಿದ್ದರು. ಅದೇ ಸಮಯದಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಮೇಲೆ ದಾಳಿ ನಡೆಸಿದ್ದಾರೆ.

ಇಂತಹ ದಾಳಿಗೆ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿದೆ. ಲಂಡನ್‌ನ ಹೈಕಮಿಷನ್‌ನಲ್ಲಿ ನಡೆದ ಘಟನೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹಿರಿಯ ಬ್ರಿಟಿಷ್ ರಾಜತಾಂತ್ರಿಕರನ್ನು ಕರೆಸಿದೆ. ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್ ಜನರಲ್ ಅನ್ನು ಧ್ವಂಸಗೊಳಿಸಿದ ನಂತರ ದೆಹಲಿಯಲ್ಲಿ ಅಮೆರಿಕದ ಚಾರ್ಜ್ ಡಿ’ಅಫೇರ್ಸ್ ಜೊತೆಗಿನ ಸಭೆಯಲ್ಲಿ ಭಾರತವು ತನ್ನ ಬಲವಾದ ಪ್ರತಿಭಟನೆಯನ್ನು ತಿಳಿಸಿತು.

ಪಂಜಾಬ್​ನಲ್ಲಿ ಪ್ರತ್ಯೇಕವಾದಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡ ಬಳಿಕ ಈ ಬೆಳವಣಿಗೆ ಕಾಣಿಸಿಕೊಳ್ಳುತ್ತಿವೆ, ವಾಸ್ತವವಾಗಿ ಪಂಜಾಬ್​ನಲ್ಲಿ ಖಲಿಸ್ತಾನಿ ಬೆಂಬಲಿಗ ಅಮೃತ್​ ಪಾಲ್ ಸಿಂಗ್ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಇಲ್ಲಿವರೆಗೆ ಸುಮಾರು 112 ಬೆಂಬಲಿಗರನ್ನು ಬಂಧಿಸಲಾಗಿದ್ದು, ಅಮೃತ್​ಪಾಲ್ ಬಂಧನದ ಭಯದಿಂದ ಪರಾರಿಯಾಗಿದ್ದಾರೆ. ಪಂಜಾಬ್ ಪೊಲೀಸರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುವುದನ್ನು ಮುಂದುವರೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!