April 11, 2026
Saturday, April 11, 2026
spot_img

ಹಾರ್ಮುಜ್ ದಾಟಿದ ಮತ್ತೆರಡು ಎಲ್‌ಪಿಜಿ ಟ್ಯಾಂಕರ್ ಶಿಪ್: 20ಕ್ಕೂ ಹೆಚ್ಚು ಹಡಗುಗಳಿಗೆ ಸಿಗಬೇಕಿದೆ ಗ್ರೀನ್‌ ಸಿಗ್ನಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ಮುಜ್ ಜಲಸಂಧಿ ಪ್ರದೇಶದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಭಾರತಕ್ಕೆ ಸೇರಿದ ಎರಡು ಎಲ್‌ಪಿಜಿ ಟ್ಯಾಂಕರ್ ಹಡಗುಗಳು ಸುರಕ್ಷಿತವಾಗಿ ತಲುಪಿವೆ. ‘ಜಗ್ ವಸಂತ್’ ಹಾಗೂ ಪೈನ್ ಗ್ಯಾಸ್ ಸಾಗಿಸುತ್ತಿದ್ದ ಮತ್ತೊಂದು ಹಡಗುಗಳು ಇರಾನ್ ಅಧಿಕಾರಿಗಳ ಸೂಚನೆಯಂತೆ ನಿಗದಿತ ಮಾರ್ಗಗಳನ್ನು ಅನುಸರಿಸಿ ಪ್ರಯಾಣ ಪೂರ್ಣಗೊಳಿಸಿದ್ದವು ಎಂದು ತಿಳಿದುಬಂದಿದೆ.

‘ಜಗ್ ವಸಂತ್’ ಹಡಗು ಸುಮಾರು 47,000 ಟನ್ ಎಲ್‌ಪಿಜಿಯನ್ನು ಸಾಗಿಸುತ್ತಿದ್ದು, ಗುಜರಾತ್‌ನ ವಡಿನಾರ್ ಬಂದರಿಗೆ ತಲುಪಿದೆ. ಹಡಗಿನಲ್ಲಿ ಇದ್ದ 14 ಮಂದಿ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಪೈನ್ ಗ್ಯಾಸ್ ಹಡಗು ಕೂಡ ಭಾರತೀಯ ಜಲಸೀಮೆಗೆ ಪ್ರವೇಶಿಸಿದ್ದು, ಇದು ಏಪ್ರಿಲ್ 2ರಂದು ಒಡಿಶಾದ ಧಮ್ರಾ ಬಂದರಿಗೆ ತಲುಪುವ ನಿರೀಕ್ಷೆಯಿದೆ.

ಆದರೆ ಪರಿಸ್ಥಿತಿ ಇನ್ನೂ ಸಂಪೂರ್ಣ ಸಾಮಾನ್ಯವಾಗಿಲ್ಲ. ಭಾರತೀಯ ಧ್ವಜ ಹೊಂದಿರುವ ಹಲವು ಹಡಗುಗಳು ಇನ್ನೂ ಹಾರ್ಮುಜ್ ಜಲಸಂಧಿಯಲ್ಲೇ ಅನುಮತಿಗಾಗಿ ಕಾಯುತ್ತಿವೆ. ಜಗ್ ವಿಕ್ರಮ್, ಗ್ರೀನ್ ಆಶಾ ಮತ್ತು ಗ್ರೀನ್ ಸಾನ್ವಿ ಸೇರಿ ಕೆಲವು ಹಡಗುಗಳು ಮಧ್ಯಪೂರ್ವದ ಮಿನಾ ಸಕ್ರ್ ಬಳಿ ನಿಲ್ಲಿಸಲಾಗಿದೆ.

ಇದನ್ನೂ ಓದಿ:

ವರದಿಗಳ ಪ್ರಕಾರ, ಒಟ್ಟು 18ರಿಂದ 20ರವರೆಗೆ ಭಾರತೀಯ ಹಡಗುಗಳು ಈ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಅವುಗಳಲ್ಲಿ 600ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿ ಇದ್ದಾರೆ. ಫೆಬ್ರವರಿ ಅಂತ್ಯದಿಂದ ಆರಂಭವಾದ ಉದ್ವಿಗ್ನತೆಯ ಬಳಿಕ ಇದುವರೆಗೆ ಕೆಲವೇ ಹಡಗುಗಳು ಸುರಕ್ಷಿತವಾಗಿ ದಾಟಲು ಸಾಧ್ಯವಾಗಿದೆ.

ಭಾರತೀಯ ನೌಕಾಪಡೆ ಪರಿಸ್ಥಿತಿಯನ್ನು ನಿಗಾದಲ್ಲಿ ಇಟ್ಟುಕೊಂಡಿದ್ದು, ಹಡಗುಗಳಿಗೆ ಸುರಕ್ಷಿತ ಮಾರ್ಗದರ್ಶನ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !