ಬ್ರಿಟನ್‌ ಪ್ರಧಾನಿ ಜಾನ್ಸನ್ ಮುಂದಿನ ವಾರ ಭಾರತಕ್ಕೆ ಭೇಟಿ; ಪ್ರಧಾನಿ ಮೋದಿ ಜೊತೆಗೆ ಮಹತ್ವದ ಮಾತುಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಮುಂದಿನ ವಾರ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದು ಪ್ರಧಾನಿ ಮೋದಿ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಿದ್ದಾರೆ. ಇದೇವೇಳೆ ಅವರು ಗುಜರಾತ್‌ಗೆ ತೆರಳುವ ಮೂಲಕ ಅಲ್ಲಿಗೆ ಆಗಮಿಸಿದ ಮೊದಲ ಬ್ರಿಟಿಷ್ ಪ್ರಧಾನಿ ಎನಿಸಿಕೊಳ್ಳುತ್ತಿದ್ದಾರೆ.
ಯುಕೆ ಪ್ರಧಾನಿ ಜಾನ್ಸನ್ ಅವರ ಮೊದಲ ಭಾರತ ಭೇಟಿಯು ಏಪ್ರಿಲ್ 21 ರಂದು ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್‌ನ ಅಹಮದಾಬಾದ್‌ ಪ್ರವಾಸದೊಂದಿಗೆ ಪ್ರಾರಂಭವಾಗುತ್ತದೆ.
ಬ್ರಿಟನ್ ಮತ್ತು ಭಾರತ ನಡುವಿನ ಪ್ರಮುಖ ಕೈಗಾರಿಕೆಗಳಲ್ಲಿನ ಹೂಡಿಕೆ ಪ್ರಕಟಣೆಗಳ ಘೋಷಣೆಯಾಗಲಿದೆ ಎಂದು ಡೌನಿಂಗ್ ಸ್ಟ್ರೀಟ್ ತಿಳಿಸಿದೆ. ನಂತರ ಜಾನ್ಸನ್ ಏ. 22 ರಂದು ಪ್ರಧಾನಿ ಮೋದಿಯವರ ಭೇಟಿಗೆ ನವದೆಹಲಿಗೆ ತೆರಳುತ್ತಾರೆ. ಅಲ್ಲಿ ಭಾರತ-ಯುಕೆ ರಕ್ಷಣಾ ಕಾರ್ಯತಂತ್ರ, ರಾಜತಾಂತ್ರಿಕ ಮತ್ತು ಆರ್ಥಿಕ ಪಾಲುದಾರಿಕೆಗಳ ವಿಚಾರನ್ನು ಕೇಂದ್ರೀಕರಿಸಿ ಸುದೀರ್ಘ ಮಾತುಕತೆಗಳು ನಡೆಯಲಿವೆ.
ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಸಂಬಂಧಪಟ್ಟಂತೆ ಮಾತುಕತೆಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಎದುರು ನೋಡುತ್ತಿದ್ದೇನೆ. ನನ್ನ ಭಾರತ ಭೇಟಿಯು ಎರಡೂ ರಾಷ್ಟ್ರಗಳ ಜನರಿಗೆ ಉದ್ಯೋಗ ಸೃಷ್ಟಿ, ಆರ್ಥಿಕತೆ ವೃದ್ಧಿ, ಇಂಧನ ಭದ್ರತೆ ಮತ್ತು ರಕ್ಷಣಾ ವಿಚಾರವಾಗಿ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಮಹತ್ವಪೂರ್ಣವಾದುದು ಎಂದು ಬೋರಿಸ್‌ ಜಾನ್ಸನ್‌ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ಜಾನ್ಸನ್ ಪ್ರಮುಖ ಉದ್ದಿಮೆದಾರರನ್ನು ಬೇಟಿಯಾಗಲಿದ್ದು, ವಾಣಿಜ್ಯ, ವ್ಯಾಪಾರ ಮತ್ತು ಜನರ ಸಂಪರ್ಕಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಭಾರತದ ಐದನೇ ಅತಿದೊಡ್ಡ ರಾಜ್ಯವಾದ ಗುಜರಾತ್‌ ಬ್ರಿಟನ್‌ ನಲ್ಲಿರುವ ಅರ್ಧದಷ್ಟು ಬ್ರಿಟಿಷ್-ಭಾರತೀಯ ವಲಸೆಗಾರರ ​​ಪೂರ್ವಜರ ನೆಲೆಯಾಗಿದೆ. ಗುಜರಾತ್‌ನ ಪ್ರಮುಖ ಕೈಗಾರಿಕೆಗಳಲ್ಲಿ ಬ್ರಿಟನ್‌ ಹೂಡಿಕೆಯನ್ನು ಘೋಷಿಸುವ ನಿರೀಕ್ಷೆಯಿದೆ. ಜೊತೆಗೆ ಅತ್ಯಾಧುನಿಕ ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಸಹಯೋಗವನ್ನು ಎದುರು ನೋಡುತ್ತಿದ್ದೇವೆ ಎಂದು ಡೌನಿಂಗ್ ಸ್ಟ್ರೀಟ್ ಹೇಳಿಕೆ ತಿಳಿಸಿದೆ.
ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯಲ್ಲಿ ಬೋರಿಸ್‌ ಜಾನ್ಸನ್ ಭಾರತದ ವ್ಯೂಹಾತ್ಮಕ ರಕ್ಷಣೆ, ರಾಜತಾಂತ್ರಿಕ ಮತ್ತು ಆರ್ಥಿಕ ಸಹಭಾಗಿತ್ವದ ಕುರಿತು ಸುದೀರ್ಘ ಮಾತುಕತೆ ನಡೆಸಲಿದ್ದಾರೆ. ಇದು ಭಾರತದೊಂದಿಗಿನ ನಮ್ಮ ನಿಕಟ ಪಾಲುದಾರಿಕೆಯನ್ನು ಬಲಪಡಿಸುವ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಬ್ರಿಟನ್‌ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!