ʼಡರ್ಟಿ ಬಾಂಬ್‌ʼ ದಾಳಿಗೆ ರಷ್ಯಾ ಹುನ್ನಾರ ನಡೆಸುತ್ತಿದೆ ಯೆಂದ ಉಕ್ರೇನ್:‌ ಭಾರತದ ಸಲಹೆಯೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಷ್ಯಾ – ಉಕ್ರೇನ್‌ ಕದನವು ದಿನದಿಂದ ದಿನಕ್ಕೆ ಉಗ್ರ ರೂಪ ಪಡೆದುಕೊಳ್ಳುತ್ತಿದೆ. ಕ್ರಿಮಿಯಾ ಸೇತುವೆ ಮೇಲಿನ ದಾಳಿಗೆ ಪ್ರತಿಯಾಗಿ ಕೀವ್‌ ಮೇಲೆ ಆಘಾತಕಾರಿ ದಾಳಿ ನಡೆಸಿದ ರಷ್ಯಾವು ಇದೀಗ ‌ʼಕೊಳಕು ಬಾಂಬ್ʼ (ಡರ್ಟಿ ಬಾಂಬ್‌) ಪ್ರಯೋಗಿಸಲು ಮುಂದಾಗಿದೆ ಎಂದು ಉಕ್ರೇನ್‌ ಆರೋಪಿಸಿದೆ.

ಡರ್ಟಿ ಬಾಂಬ್‌ ಬೆದರಿಕೆಯ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದ ಸಹವರ್ತಿ ಸೆರ್ಗೆಯ್ ಶೋಯಿಗು ಅವರೊಂದಿಗೆ ಬುಧವಾರ ಮಾತನಾಡಿದ್ದಾರೆ ಮತ್ತು ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ‘ಕೊಳಕು ಬಾಂಬ್’ಗಳ ಬಳಕೆಯ ಬೆದರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಘರ್ಷಣೆಯನ್ನು ಶೀಘ್ರವಾಗಿ ಪರಿಹರಿಸಲು ರಷ್ಯಾ ಮತ್ತು ಉಕ್ರೇನ್ ರಾಜತಾಂತ್ರಿಕತೆ ಮತ್ತು ಮಾತುಕತೆಯನ್ನು ಮುಂದುವರಿಸಬೇಕು ಎಂಬ ಭಾರತದ ನಿಲುವನ್ನು ರಾಜನಾಥ್ ಸಿಂಗ್ ಬುಧವಾರ ಪುನರುಚ್ಚರಿಸಿದ್ದಾರೆ. ಅಂತಹ ಶಸ್ತ್ರಾಸ್ತ್ರಗಳ ಬಳಕೆಯು ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿರುವುದರಿಂದ ಪರಮಾಣು ಯುದ್ಧವನ್ನು ಎಲ್ಲಾ ವೆಚ್ಚದಲ್ಲಿಯೂ ತಪ್ಪಿಸಬೇಕು ಎಂದು ಅವರು ಶೋಯಿಗುಗೆ ಹೇಳಿದ್ದಾರೆ ಎನ್ನಲಾಗಿದೆ.

ಡರ್ಟಿ ಬಾಂಬ್‌ ಬೆದರಿಕೆಯ ಹಿನ್ನೆಲೆಯಲ್ಲಿ ಭಾರತದ ರಾಯಭಾರ ಕಚೇರಿಯು ಉಕ್ರೇನ್‌ ನಲ್ಲಿರುವ ಭಾರತೀಯರಿಗೆ ಕೂಡಲೇ ಲಭ್ಯವಿರುವ ಮಾರ್ಗಗಳನ್ನು ಬಳಸಿಕೊಂಡು ಉಕ್ರೇನ್‌ ತೊರೆಯುವಂತೆ ಸಲಹೆ ನೀಡಿದೆ.

ಏನಿದು ಡರ್ಟಿ ಬಾಂಬ್‌ ?
‘ಡರ್ಟಿ ಬಾಂಬ್’ ಎಂಬುದು ಪರಮಾಣು ಬಾಂಬ್‌ ಗಿಂತ ಭಿನ್ನವಾಗಿದ್ದು ಇದು ಸ್ಪೋಟಕ ಸಾಧನಗಳಾಗಿ ಯುರೇನಿಯಂ ಅಥವಾ ಪ್ಲುಟೋನಿಯಂನಂತಹ ವಿಕಿರಣಶೀಲ ವಸ್ತುಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಇದು ಪರಮಾಣು ಬಾಂಬ್‌ನಂತೆ ವಿಕಿರಣ ಮೋಡವನ್ನು ಸೃಷ್ಟಿಸುವುದಿಲ್ಲ. ಬದಲಾಗಿ, ಇದು ವಿಕಿರಣಶೀಲ ವಸ್ತುಗಳನ್ನು ಕೆಲವು ನೂರು ಮೀಟರ್ ವ್ಯಾಪ್ತಿಯಲ್ಲಿ ಹರಡುತ್ತದೆ ಎನ್ನಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!