ಶಾಂತಿ, ಸೌಹಾರ್ದ ಕಾಪಾಡುವಲ್ಲಿ ಉಲೇಮಾಗಳ ಪಾತ್ರ ಮಹತ್ವದ್ದು: ಅಜಿತ್ ದೋವಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ಲಾಮಿಕ್ ಸ್ಟೇಟ್ಸ್(ಐಸಿಸ್)ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಮಾನವೀಯತೆಗೇ ಒಡ್ಡಿರುವ ಸವಾಲಾಗಿದೆ. ಭಾರತ ಮತ್ತು ಇಂಡೋನೇಷ್ಯಾದಲ್ಲಿ ಅಂತರ್ ನಂಬಿಕೆಯ ಶಾಂತಿ ಮತ್ತು ಸಾಮಾಜಿಕ ಸೌಹಾರ್ದದ ಸಂಸ್ಕೃತಿ ಎತ್ತಿಹಿಡಿಯುವಲ್ಲಿ ಉಲೇಮಾಗಳ ಪಾತ್ರ ಮಹತ್ವದ್ದಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಭಾರತ ಮತ್ತು ಇಂಡೋನೇಷ್ಯಾದಲ್ಲಿ ಅಂತರ್‌ನಂಬಿಕೆಯ ಶಾಂತಿ ಮತ್ತು ಸಾಮಾಜಿಕ ಸೌಹಾರ್ದದ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಉಲೇಮಾ ಪಾತ್ರ ಕುರಿತಂತೆ ನಡೆದ ಸಂವಾದ ಕಾರ್ಯಕ್ರಮವನ್ನು ಇಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಮತಾಂಧತೆ, ಭಯೋತ್ಪಾದನೆ, ತೀವ್ರವಾದಗಳ ವಿರುದ್ಧದ ಹೋರಾಟದಲ್ಲೂ ಉಲೇಮಾ ಪಾತ್ರ ಪ್ರಮುಖವಾಗಿದ್ದು, ಮತಾಂಧತೆಯ ನಿವಾರಣೆಯಲ್ಲಿ ಸಮಾನ ವ್ಯಾಖ್ಯಾನವೊಂದನ್ನು ಅಭಿವೃದ್ಧಿಪಡಿಸುವಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.
ಮತಾಂಧತೆ ಮತ್ತು ಭಯೋತ್ಪಾದನೆಗೆ ವಿರುದ್ಧವಾಗಿ, ಪ್ರಗತಿಪರ ಚಿಂತನೆಗಳು ಮತ್ತು ವಿಚಾರಗಳೊಂದಿಗೆ ಇಸ್ಲಾಮಿನ ಮೂಲ ಸಹಿಷ್ಣುತೆ ಮತ್ತು ಅತಿರೇಕವಿಲ್ಲದ ಉದಾರವಾದಿ ತತ್ವಗಳ ಬಗ್ಗೆ ಸಮುದಾಯ ಜನರಲ್ಲಿ ಅರಿವು ಮೂಡಿಸುವಲ್ಲಿ ಉಲೇಮಾ ಪ್ರಧಾನ ಪಾತ್ರ ವಹಿಸುವ ಮೂಲಕ ಶಾಂತಿ, ಸಾಮರಸ್ಯ, ಸಹಬಾಳ್ವೆಯ ಬದುಕಿನ ಅಗತ್ಯವನ್ನು ಪ್ರಚುರಪಡಿಸಬೇಕಾಗಿದೆ ಎಂದು ತಿಳಿಸಿದರು.

ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ಭಾರತ ಮತ್ತು ಇಂಡೋನೇಷ್ಯಾ ಬಲಿಪಶುಗಳಾಗಿವೆ.ಸಿರಿಯಾ ಮತ್ತು ಅಫ್ಘಾನಿಸ್ಥಾನದಿಂದ ಬಂದ ಐಸಿಸ್ ಪ್ರೇರಿತ ಭಯೋತ್ಪಾದಕ ಸಂಘಟನೆಗಳು ಉಭಯ ದೇಶಗಳಿಗೆ ಬೆದರಿಕೆ ಒಡ್ಡುತ್ತಿವೆ.ಇದನ್ನು ಎದುರಿಸುವಲ್ಲಿ ನಾಗರಿಕರ ಸಹಕಾರವೂ ಅಗತ್ಯ ಎಂದರು.ಇಂಡೋನೇಷ್ಯಾದ ರಾಜಕೀಯ, ಕಾನೂನು ಮತ್ತು ಭದ್ರತಾ ವ್ಯವಹಾರಗಳ ಸಮನ್ವಯ ಸಚಿವ ಮೊಹಮ್ಮದ್ ಮಹ್ಫೂದ್ ಎಂ.ಡಿ. ಅವರ ನೇತೃತ್ವದಲ್ಲಿ ಉಲೇಮಾ ಮತ್ತು ಇತರ ಧರ್ಮ ಪ್ರತಿನಿಧಿಗಳ ನಿಯೋಗವೊಂದು ಭಾರತಕ್ಕೆ ಬಂದಿದೆ.ಇಂಡೋನೇಷ್ಯಾ ಮುಸ್ಲಿಮ್ ಬಹುಸಂಖ್ಯಾತ ದೇಶವಾಗಿದ್ದರೂ ಸಹಿಷ್ಣುತೆಗೆ ಹೆಸರಾಗಿದೆ.

ಅಲ್ಲದೆ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಅಪಾರವಾಗಿ ಗೌರವಿಸುವ ದೇಶವಾಗಿದೆ.ಭಯೋತ್ಪಾದನೆ ಈ ಎರಡೂ ದೇಶಗಳನ್ನು ಕಾಡುತ್ತಿರುವ ದೊಡ್ಡ ಪಿಡುಗಾಗಿದ್ದು, ಇದರ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ಸಹಕಾರದೊಂದಿಗೆ ಕೆಲಸ ಮಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!