ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಹುಮಾ ಖುರೇಷಿ ಮತ್ತು ಜನಪ್ರಿಯ ಆಕ್ಟಿಂಗ್ ಕೋಚ್ ರಚಿತ್ ಸಿಂಗ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ಎಲ್ಲೆಡೆ ಹರಿದಾಡುತ್ತಿತ್ತು. ಇವರಿಬ್ಬರು ತಮ್ಮ ಸಂಬಂಧವನ್ನು ಎಷ್ಟೇ ಗುಟ್ಟಾಗಿಡಲು ಪ್ರಯತ್ನಿಸಿದರೂ ಕೂಡ ರಚಿತ್ ಅವರ ಸೋಶಿಯಲ್ ಮೀಡಿಯಾದಲ್ಲಿನ ಫೋಟೋಗಳು ಅವರ ಪ್ರೀತಿಯನ್ನು ಸಾರಿ ಹೇಳುತ್ತಿದ್ದವು. ಈಗ ಬಂದಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ, ಈ ಜೋಡಿಯು ಈ ವರ್ಷದ ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಹಸಮಣೆ ಏರಲಿದ್ದಾರೆ.
ಹುಮಾ ಖುರೇಷಿ ಮತ್ತು ರಚಿತ್ ಸಿಂಗ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ಮೂಲಗಳ ಪ್ರಕಾರ ಇವರ ವಿವಾಹವು ಮುಂಬೈನಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ನಡೆಯಲಿದೆ. ಮದುವೆಯ ನಂತರ ಚಿತ್ರರಂಗದ ಗಣ್ಯರಿಗಾಗಿ ಮುಂಬೈನಲ್ಲಿ ಒಂದು ದೊಡ್ಡ ಔತಣಕೂಟವನ್ನು ಏರ್ಪಡಿಸಲಾಗುವುದು ಎಂದು ತಿಳಿದು ಬಂದಿದೆ.
ಈ ಜೋಡಿಯು ಸೆಪ್ಟೆಂಬರ್ 2025 ರಲ್ಲಿ ಅಮೆರಿಕಾದಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು. ಅಷ್ಟೆ ಅಲ್ಲದೇ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಮದುವೆಯಲ್ಲೂ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿತ್ತು.
ರಚಿತ್ ಸಿಂಗ್ ಅವರು ಚಿತ್ರರಂಗದ ಜನಪ್ರಿಯ ಆಕ್ಟಿಂಗ್ ಕೋಚ್ ಆಗಿದ್ದು, ಆಲಿಯಾ ಭಟ್, ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಅವರಂತಹ ಸ್ಟಾರ್‌ಗಳಿಗೆ ತರಬೇತಿ ನೀಡಿದ್ದಾರೆ. ಅವರು ‘ಕರ್ಮ ಕಾಲಿಂಗ್’ ಎಂಬ ಸೀರಿಸ್‌ನಲ್ಲಯೂ ನಟಿಸಿದ್ದಾರೆ. ಹುಮಾ ಖುರೇಷಿ ಸದ್ಯ ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.



