Tuesday, March 28, 2023

Latest Posts

ಪ್ರತಿಫಲಾಪೇಕ್ಷೆಯಿಲ್ಲದೆ ಸ್ವತಂತ್ರ್ಯ ಹೋರಾಟಕ್ಕೆ ಧುಮುಕಿದ ದಿಟ್ಟ ಮಹಿಳೆ ʻಉಮಾಬಾಯಿ ಕುಂದಾಪುರʼ

ತ್ರಿವೇಣಿ ಗಂಗಾಧರಪ್ಪ 

ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಲಿಂಗಭೇದವಿಲ್ಲದೆ ಪುರುಷರು/ಮಹಿಳೆಯರು ಕೊಡುಗೆ ಕೊಟ್ಟಿದ್ದಾರೆ. ಅವರಲ್ಲಿ ಕರ್ನಾಟಕದ 27 ವರ್ಷ ವಯಸ್ಸಿನ ಈ ಯುವತಿ ಕೂಡ ಒಬ್ಬಳು. ಎಷ್ಟರ ಮಟ್ಟಿಗೆ ದೇಶ ಪ್ರೇಮವೆಂದರೆ, ತನಗೆ ಬರಬಹುದಾಗಿದ್ದ ಪ್ರಶಸ್ತಿ-ಪುರಸ್ಕಾರ, ಸರಕಾರದ ಉನ್ನತ ಹುದ್ದೆ- ಎಲ್ಲವನ್ನೂ ತಿರಸ್ಕರಿಸಿ ಹೋರಾಟಕ್ಕೆ ಧುಮುಕಿದ ರಾಜ್ಯದ ಅಪರೂಪದ ಮಹಿಳೆ.

1919ರ ರೌಲಟ್ ಕಾಯಿದೆ ಸಾರ್ವಜನಿಕ ಆಕ್ರೋಶ ದೇಶವನ್ನು ಆವರಿಸುತ್ತಿದ್ದಂತೆ, ʻಉಮಾಬಾಯಿ ಕುಂದಾಪುರʼ ಯುವತಿಯೊಬ್ಬಳ ಮನಸಲ್ಲಿ ಇನ್ನೇನೋ ಓಡುತ್ತಿತ್ತು. ಈ ಅನ್ಯಾಯದ ಕೃತ್ಯವನ್ನು ವಿರೋಧಿಸಲು ಗಾಂಧಿ ಭಾರತೀಯರಿಗೆ ಮನವಿ ಮಾಡಿದ್ದರು ಮತ್ತು ಸಾವಿರಾರು ಪ್ರತಿಭಟನಾಕಾರರು ಬಾಂಬೆಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವೇಳೆ ಉಮಾಬಾಯಿ, ಮೆಟ್ರಿಕ್ಯುಲೇಷನ್ ಪರೀಕ್ಷೆಗಳನ್ನು ತೆಗೆದುಕೊಂಡಿದ್ದರು. ಒಂದು ವಾರದ ಕಳೆದ ಬಳಿಕ ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಕಾನೂನನ್ನು ಶಾಂತಿಯುತವಾಗಿ ಪ್ರತಿಭಟಿಸಿದ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದಾಗ ಇಡೀ ದೇಶವು ಸ್ತಬ್ಧವಾಯಿತು. ಈ ವೇಳೆ, ದುರಂತದ ವಿರುದ್ಧ ಪ್ರತಿಭಟನೆ ಮಾಡಲು ಬೀದಿಗಿಳಿದ ಸಾವಿರಾರು ಜನರಲ್ಲಿ ಉಮಾಬಾಯಿ ಕೂಡ ಒಬ್ಬರು.

ಆಗಷ್ಟ್ 1, 1920ರಂದು ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರು ಮೃತರಾದರು. ತಿಲಕರ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ  ಪಾಲ್ಗೊಳ್ಳಲು ಪ್ರೇರೇಪಿಸಿತು. ಮಹಾತ್ಮ ಗಾಂಧೀಜಿಯವರು ಅಸಹಕಾರ ಚಳವಳಿಗೆ ಕರೆಕೊಟ್ಟಾಗ, ಉಮಾಬಾಯಿ ತನ್ನ ಸಹೋದರ ರಘುರಾಮರಾವ್, ಪತಿ ಸಂಜೀವರಾವ್ ಜತೆ ಸೇರಿ ಚಳುವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಖಾದಿ ಬಗ್ಗೆ ಪ್ರಚಾರ ಮಾಡಲು ಆರಂಭಿಸಿದರು. ಮನೆಮನೆಗೆ ತೆರಳಿ ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಚಳುವಳಿಗೆ ಸಂಬಂಧಿಸಿದಂತೆ ಹಲವಾರು ನಾಟಕಗಳನ್ನು ಬರೆದು ಪ್ರದರ್ಶಿಸಿದರು.

ಉಮಾಬಾಯಿ ಕುಂದಾಪುರ ಜೀವನ:

ಉಮಾಬಾಯಿಯವರು 25 ನೇ ಮಾರ್ಚ್‌ 1892ರಲ್ಲಿ ಕುಂದಾಪುರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಬಾಲ್ಯದ ಹೆಸರು ಭವಾನಿ ಗೋಳಿಕೇರಿ. ತಂದೆ ಗೋಳಿಕೇರಿ ಕೃಷ್ಣರಾವ್ ತಾಯಿ ತುಂಗಾಬಾಯಿ. ಇವರಿಗೆ ಒಟ್ಟು ಆರು ಮಂದಿ ಮಕ್ಕಳು. 1898ರಲ್ಲಿ ಸಹೋದರರ ಜೊತೆಗೆ ಉಮಾಬಾಯಿಯವರೂ ಸಹ ಮುಂಬಯಿ ಮಹಾನಗರವನ್ನು ಸೇರಿಕೊಂಡರು. 13ನೇ ವಯಸ್ಸಿಗೆ ಸುಸ್ಥಿತಿಯಲ್ಲಿರುವ ಕುಟುಂಬದ ಸಂಜೀವರಾವ್ ಕುಂದಾಪುರ್ ಅವರನ್ನು ಮದುವೆಯಾದರು. ಆಕೆಯ ಮಾವ ಆನಂದರಾವ್ ಕುಂದಾಪುರ ಅವರ ಪ್ರೋತ್ಸಾಹದ ಮೇರೆಗೆ ಉಮಾಬಾಯಿ ಮದುವೆಯ ನಂತರ ಶಿಕ್ಷಣವನ್ನು ಮುಂದುವರೆಸಿದರು.

ಸ್ವತಂತ್ರ್ಯ ಚಳುವಳಿಯಲ್ಲಿ ಉಮಾಬಾಯಿ ಪಾತ್ರ

ಸ್ವಾತಂತ್ರ್ಯ ಚಳುವಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಮತ್ತು ದೇಶದ ಅತಿದೊಡ್ಡ ಸ್ವಯಂಸೇವಾ ಸಂಸ್ಥೆಗಳಲ್ಲಿ ಒಂದಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ನಿಸ್ವಾರ್ಥವಾಗಿ ಹಗಲು ರಾತ್ರಿ ಜನರಿಗೆ ಸೇವೆ ಸಲ್ಲಿಸಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ ಆಕೆ ತನಗೆ ಬಂದ ಗೌರವಗಳು ಮತ್ತು ಕೊಡುಗೆಗಳನ್ನು ನಿರಾಕರಿಸಿದರು. ಈ ಕುರಿತು ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಉಮಾಬಾಯಿ ಅವರಿಗೆ ಶ್ರದ್ಧಾಂಜಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

1923 ರಲ್ಲಿ ಇವರಿಗೆ 31ನೇ ವಯಸ್ಸಲ್ಲಿದ್ದಾಗ ಅವರ ಪತಿ ಕ್ಷಯರೋಗದಿಂದ ನಿಧನರಾದರು. ಗಂಡನ ಮರಣಾನಂತರ, ಉಮಾಬಾಯಿಯವರು ಮಾವನೊಂದಿಗೆ ಹುಬ್ಬಳ್ಳಿಗೆ ಹಿಂತಿರುಗಿದರು. ಅಲ್ಲಿ ಅವರು ಕುಟುಂಬದ ಒಡೆತನದ ʻಕರ್ನಾಟಕ ಮುದ್ರಣಾಲಯʼ ಮತ್ತು ‘ತಿಲಕ ಕನ್ಯಾ ಶಾಲೆ’ ಎಂಬ ಬಾಲಕಿಯರ ಶಾಲೆಯನ್ನು ನೋಡಿಕೊಳ್ಳಲು ಪ್ರೋತ್ಸಾಹಿಸಲಾಯಿತು. ಮಕ್ಕಳು ಮತ್ತು ಅವರ ಪೋಷಕರನ್ನು ಸ್ವಾತಂತ್ರ್ಯ ಚಳವಳಿಗೆ ಸೇರಲು ಪ್ರೇರೇಪಿಸುವ ಅವರ ಕೆಲಸವನ್ನು ಶೀಘ್ರದಲ್ಲೇ ಸ್ವಾತಂತ್ರ್ಯ ಹೋರಾಟಗಾರ ಡಾ ಎನ್ ಎಸ್ ಹರ್ಡಿಕರ್ ಅವರು ಗಮನಿಸಿ ಅವರನ್ನು ಹಿಂದೂಸ್ತಾನಿ ಸೇವಾ ದಳದ ಮಹಿಳಾ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಿದರು.

ತನ್ನ ಕೆಲಸದ ಭಾಗವಾಗಿ ಉಮಾಬಾಯಿ ನೂಲುವ, ನೇಯ್ಗೆ, ಕ್ಯಾಂಪಿಂಗ್, ಡ್ರಿಲ್ ಇತ್ಯಾದಿಗಳಲ್ಲಿ ತರಬೇತಿ ನೀಡಿದರು. ಹೆಚ್ಚು ಹೆಚ್ಚು ಜನರು ದಳಕ್ಕೆ ಸೇರಿಕೊಂಡು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸಿದರು. ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರು ಅವರ ಕೆಲಸ ಮತ್ತು ನಿರ್ಣಯದಿಂದ ಪ್ರಭಾವಿತರಾದರು. ಸ್ವಾತಂತ್ರ್ಯ ಹೋರಾಟವನ್ನು ಇನ್ನಷ್ಟು ಬಲಗೊಳಿಸಲು ಮಹಿಳಾ ಸಾಮರ್ಥ್ಯವನ್ನು ರೂಪಿಸುವ ಅಗತ್ಯವನ್ನು ಉಮಾಬಾಯಿ ಅರಿತುಕೊಂಡರು. ತನ್ನ ಸ್ವಂತ ಶಿಕ್ಷಣ ಮತ್ತು ಸಾಕ್ಷರತೆಯ ಅನುಭವದಿಂದ, ಅವರು ಇತರ ಮಹಿಳೆಯರಿಗೆ ಶಿಕ್ಷಣ ನೀಡಲು ನಿರ್ಧರಿಸಿದರು ಮತ್ತು ತಮ್ಮದೇ ಆದ ಎನ್‌ಜಿಒ ಭಗಿನಿ ಮಂಡಲವನ್ನು ಸ್ಥಾಪಿಸಿದರು. ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಧಿವೇಶನದ ಸಂಘಟಕರಲ್ಲಿ ಒಬ್ಬರಾಗಿದ್ದಾಗ ಕರ್ನಾಟಕದ ವಿವಿಧ ಭಾಗಗಳಿಂದ ಮಹಿಳೆಯರನ್ನು ಸಜ್ಜುಗೊಳಿಸುವ ಅವರ ಪ್ರಯತ್ನವು ಫಲ ನೀಡಿತು.

1924 ರಲ್ಲಿ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕಾಗಿ 150 ಕ್ಕೂ ಹೆಚ್ಚು ಮಹಿಳಾ ಸ್ವಯಂಸೇವಕರನ್ನು ಒಟ್ಟುಗೂಡಿಸಿದರು. 1882ರ ಉಪ್ಪಿನ ಕಾಯಿದೆಯನ್ನು ವಿರೋಧಿಸಿ ಗಾಂಧೀಜಿಯವರ ನೇತೃತ್ವದಲ್ಲಿ ದಂಡಿ ಮೆರವಣಿಗೆಯ ಅಂಗವಾಗಿ ಸಾವಿರಾರು ಜನರು ಬೀದಿಗಿಳಿದಿದ್ದಾಗ ಅದೇ ಸಮಯದಲ್ಲಿ ಜೈಲುವಾಸ ಅನುಭವಿಸಿದರು. ಆಕೆ ಬಿಡುಗಡೆಯಾಗುವಷ್ಟರಲ್ಲಿ ಬ್ರಿಟಿಷರು ಕರ್ನಾಟಕ ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಂಡಿದ್ದಲ್ಲದೆ, ಉಸ್ತುವಾರಿ ವಹಿಸಿದ್ದ ಶಾಲೆಯನ್ನು ಮುಚ್ಚಿ ಭಗಿನಿ ಮಂಡಲವನ್ನು ಕಾನೂನುಬಾಹಿರವೆಂದು ಘೋಷಿಸಿದರು. ಕೊನೆಗೆ 1992ರಲ್ಲಿ ಉಮಾಬಾಯಿ ಅವರು ಹುಬ್ಬಳ್ಳಿಯಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿದರು.

ಧಿಕ್ಕರಿಸಿದ, ಕ್ರಾಂತಿಕಾರಿ, ಮತ್ತು ಅಶಕ್ತ ಮಹಿಳೆಯರಿಗೆ ಚಾಂಪಿಯನ್ ಆಗಿದ್ದ ಉಮಾಬಾಯಿ ಗಾಂಧಿಯವರಿಂದ ಶ್ಲಾಘಿಸಲ್ಪಟ್ಟರು.  ಸ್ವಾತಂತ್ರ್ಯ ಹೋರಾಟಗಾರರ ಮೆಚ್ಚುಗೆಗೆ ಪಾತ್ರರಾಗಿ ಅವರ ಅಸಾಧಾರಣ ಕೊಡುಗೆಗಾಗಿ ಪ್ರತಿ ಪೀಳಿಗೆಯು ಯಾವಾಗಲೂ ಇವರನ್ನು ಕೊಂಡಾಡುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!