ಅನೈತಿಕ ಸಂಬಂಧ: ಮಹಿಳೆಗೆ ಮಚ್ಚಿನಿಂದ ಹಲ್ಲೆ ನಡೆಸಿ ಬೆಂಕಿ ಹಚ್ಚಿದ ಕಿರಾತಕ!

ಹೊಸದಿಗಂತ ವರದಿ, ನಾಗಮಂಗಲ:

ಮಹಿಳೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ನಾಗಮಂಗಲ ತಾಲೂಕಿನ ಸೂಳೆಕೆರೆ ಬಳಿ ನಡೆದಿದೆ.
ಮಂಡ್ಯ ತಾಲೂಕಿನ ಮರಕಾಡು ದೊಡ್ಡಿ ಗ್ರಾಮದ ಪ್ರಭಾ (40) ಸುಟ್ಟಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ದೇಹದ ಶೇ.40ರಷ್ಟು ಭಾಗ ಸುಟ್ಟುಹೋಗಿದ್ದು ಜಿಲ್ಲಾಸ್ಪತ್ರೆಯಲ್ಲಿ ನರಳುತ್ತಿದ್ದಾಳೆ.
ಘಟನೆ ವಿವರ :
ಮರಕಾಡುದೊಡ್ಡಿ ಗ್ರಾಮದ ಪ್ರಭಾ ಹತ್ತು ವರ್ಷಗಳ ಹಿಂದೆ ಸೋದರಮಾವ ಪಾಪಣ್ಣ ಅವರನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು
ಗಂಡು ಮಕ್ಕಳಿದ್ದರು. ಮದುವೆಯಾದ ನಂತರದಲ್ಲಿ ದಂಪತಿ ನಡುವೆ ಜಗಳ ನಡೆದು ಪ್ರಭಾ ಬೆಂಗಳೂರಿಗೆ ಹೋಗಿ ಗಾರೆ ಕೆಲಸ ಮಾಡಿಕೊಂಡಿದ್ದಳು. ಆ ಸಮಯದಲ್ಲೇ ಮೇಸಿ ಬಸವರಾಜ ಎಂಬಾತ ಪರಿಚಿತನಾಗಿದ್ದ. ನಂತರ ಇಬ್ಬರ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತ್ತು ಎಂದು ಹೇಳಲಾಗಿದೆ.
ತದನಂತರದಲ್ಲಿ ಸಂಬಂಧಿಕರು ಪ್ರಭಾಳ ಮನವೊಲಿಸಿ ವಾಪಸ್ ಕರೆತಂದು ಗಂಡನ ಜೊತೆ ನೆಲೆಸುವಂತೆ ಮಾಡಿದ್ದರು. ಆದರೆ, ಪತಿ ಪಾಪಣ್ಣ ಕಿಡ್ನಿವೈಲ್ಯದಿಂದ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದನು. ಆಗ ಮತ್ತೆ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಹೋಗಿದ್ದ ಪ್ರಭಾಳಿಗೆ ಬಸವರಾಜ ಸಂಪರ್ಕ ಮತ್ತೆ ಬೆಳೆಯಿತು.
ಆತನೊಂದಿಗೆ ಗಾರೆ ಕೆಲಸ ಮಾಡಿಕೊಂಡಿದ್ದ ಪ್ರಭಾ ಕೆಲ ಸಮಯದವರೆಗೆ ಚುಂಚನಕಟ್ಟೆಯಲ್ಲೂ ಇದ್ದಳು. ಆ ಸಮಯದಲ್ಲಿ ತನ್ನಿಬ್ಬರು ಮಕ್ಕಳನ್ನು ಜೊತೆಗಿರಿಸಿಕೊಂಡಿದ್ದಳು. ಅವರೂ ಸಹ ತಾಯಿಯೊಂದಿಗೆ ಕೆಲಸದಲ್ಲಿ ನೆರವಾಗಿದ್ದರು. ಆ ಸಮಯದಲ್ಲಿ ಬಸವರಾಜ ಮತ್ತು ಪ್ರಭಾ ನಡುವೆ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ತೆಗೆದು ಹೊಡೆಯುತ್ತಿದ್ದನಲ್ಲದೆ, ಕಿರಿಯ ಮಗನಿಗೂ
ಹೊಡೆದು-ಬಡಿದು ಮಾಡುತ್ತಿದ್ದನು ಎನ್ನಲಾಗಿದೆ. ಬಸವರಾಜನಿಗೆ ಹೆದರಿ ಮಕ್ಕಳಿಬ್ಬರು ಅಜ್ಜಿ ಮನೆಗೆ ಬಂದು ನೆಲೆಸಿದ್ದು, ಸೊಪ್ಪು ಮಾರುವ ಕೆಲಸಕ್ಕೆ ಸಹಾಯಕವಾಗಿದ್ದರು. ಇತ್ತ ಮತ್ತೆ ಪ್ರಭಾ ಬೆಂಗಳೂರಿಗೆ ಹೋಗಿದ್ದ ಸಮಯದಲ್ಲಿ ಹಿಂದೆ ಇದ್ದ ಮನೆಯನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ವಾಸವಾಗಿದ್ದಳು.
ಕೊಲೆಗೆ ಸಂಚು ರೂಪಿಸಿಕೊಂಡು ಕರೆದೊಯ್ದ ಬಸವರಾಜ ಶುಕ್ರವಾರ (ಜೂ.10) ದಂದು ಪ್ರಭಾಳನ್ನು ಹೊರಗೆ ಸುತ್ತಾಡಿಕೊಂಡು ಬರೋಣವೆಂದು ಪುಸಲಾಯಿಸಿ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಮೊದಲ ದಿನ ಶ್ರೀ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಿ ದರ್ಶನ ಮುಗಿಸಿದ್ದಾರೆ. ನಂತರ ಮೈಸೂರಿಗೆ ತೆರಳಿ ಲಾಡ್ಜ್‌ವೊಂದರಲ್ಲಿ ಇಬ್ಬರೂ ಉಳಿದುಕೊಂಡಿದ್ದಾರೆ. ಶುಕ್ರವಾರ, ಶನಿವಾರ ಮೈಸೂರಿನಲ್ಲೇ ಇದ್ದ ಇಬ್ಬರೂ ಭಾನುವಾರ ಬೆಳಗ್ಗೆ ಮೈಸೂರಿನಿಂದ ಪಾಂಡವಪುರಕ್ಕೆ ಆಗಮಿಸಿದರು. ಅಲ್ಲಿ ಬಸವರಾಜ ಕ್ಯಾನೊಂದಕ್ಕೆ ಒಂದು ಲೀಟರ್ ಪೆಟ್ರೋಲ್ ತುಂಬಿಸಿಕೊಂಡಿದ್ದಾನೆ. ಅನುಮಾನ ಬಂದು ಪ್ರಭಾ ಕೇಳಿದಾಗ ನಾಗಮಂಗಲ ಬಳಿ ಸುಂದರವಾದ ತಾಣವಿದೆ. ಅಲ್ಲಿಗೆ ಹೋಗಿಬರೋಣ. ಮುಂಜಾಗ್ರತೆಯಾಗಿ ಪೆಟ್ರೋಲ್ ಇಟ್ಟುಕೊಂಡಿರೋಣವೆಂದು ಹೇಳಿದನೆನ್ನಲಾಗಿದೆ.
ಸೂಳೆಕೆರೆ ಬಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಇಬ್ಬರೂ ಬೈಕ್‌ನಲ್ಲಿ ನಾಗಮಂಗಲದ ಸೂಳೆಕೆರೆ ಬಳಿ ನಿರ್ಜನ ಪ್ರದೇಶದಲ್ಲಿ ತೆರಳುವಾಗ ಇದ್ದಕ್ಕಿದ್ದಂತೆ ಬಸವರಾಜ ಬೈಕ್‌ನ್ನು ಮಣ್ಣಿನ ರಸ್ತೆಗೆ
ಇಳಿಸಿದನೆನ್ನಲಾಗಿದೆ. ಅಲ್ಲಿ ಬೈಕ್ ನಿಲ್ಲಿಸಿದ ಬಸವರಾಜ ಏಕಾಏಕಿ ಮೊದಲೇ ಬೈಕ್‌ನಲ್ಲಿಟ್ಟುಕೊಂಡಿದ್ದ ಮಚ್ಚಿನಿಂದ ಪ್ರಭಾಳ ಮೇಲೆ ಹಲ್ಲೆ ನಡೆಸಿದನು. ನಂತರ ಆಕೆಯ ಮೈಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದನು. ಬೆಂಕಿಯ ಜ್ವಾಲೆಗೆ ಸಿಲುಕಿ ಚೀರಾಡುತ್ತಾ ಪ್ರಭಾ ಮುಖ್ಯ ರಸ್ತೆಗೆ ಬಂದು ಕೂಗಿಕೊಂಡಿದ್ದಾಳೆ. ಈ ಸಮಯದಲ್ಲಿ ಆ ಮಾರ್ಗದಲ್ಲಿ ತೆರಳುತ್ತಿದ್ದವರು ಆಕೆಯ ರಕ್ಷಣೆಗೆ ಬಂದರು. ಇದನ್ನು ನೋಡಿದ ಬಸವರಾಜ ಅಲ್ಲಿಂದ ಪರಾರಿಯಾದನು. ಕೂಡಲೇ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಆಂಬ್ಯುಲೆನ್ಸ್ ಪ್ರಭಾಳನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದಿತು. ನಾಗಮಂಗಲ ಗ್ರಾಮಾಂತರ ಪೊಲೀಸರು ಮಂಡ್ಯಕ್ಕೆ ಆಗಮಿಸಿ ಮಹಿಳೆಯ ಹೇಳಿಕೆ ಪಡೆದುಕೊಂಡರು.
ಶೇ.40ರಷ್ಟು ಸುಟ್ಟ ಗಾಯ ಮಚ್ಚಿನಿಂದ ಹಲ್ಲೆಗೊಳಗಾಗಿ, ಬೆಂಕಿಯ ಜ್ವಾಲೆಗೆ ಸಿಲುಕಿದ್ದ ಪ್ರಭಾಳ ಶೇ.40ರಷ್ಟು ದೇಹ ಸುಟ್ಟಗಾಯವಾಗಿದೆ. ಆಕೆ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಬೆಂಗಳೂರು ಅಥವಾ ಮೈಸೂರಿಗೆ ಕರೆದೊಯ್ಯುವುದಕ್ಕೆ ಪ್ರಭಾಳ ಪೋಷಕರ ಬಳಿ ಹಣವಿಲ್ಲ. ಅದಕ್ಕಾಗಿ ಕೈಚೆಲ್ಲಿ ಕುಳಿತಿದ್ದಾರೆ. ಸುಟ್ಟಗಾಯಗಳೊಂದಿಗೆ ಪ್ರಭಾಳ ಕೂಗಾಟ, ಚೀರಾಟ ಎಲ್ಲರ ಕರುಳು ಹಿಂಡುವಂತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!