ಅನಧಿಕೃತ ಹೋಂಸ್ಟೇ ಆರೋಪ: ಉಪ ವಿಭಾಗಾಧಿಕಾರಿಗಳಿಂದ ಪರಿಶೀಲನೆ

ಹೊಸ ದಿಗಂತ ವರದಿ, ಕುಶಾಲನಗರ:

ಕೂಡುಮಂಗಳೂರು ಗ್ರಾ.ಪಂ‌ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ‌ಲ್ಲಿ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಹೋಂಸ್ಟೇ ನಡೆಸುತ್ತಿರುವುದಾಗಿ ಗ್ರಾಮಸ್ಥರು ನೀಡಿದ ದೂರಿನ‌ ಮೇರೆಗೆ ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿತು.
ಕೆ.ಕೆ.ಭೋಗಪ್ಪ ಎಂಬವರು ಕನಕ‌ ಬಡಾವಣೆಯಲ್ಲಿ ನಡೆಸುತ್ತಿರುವ ಸಾತ್ವಿಕ್ ಹೋಂ ಸ್ಟೇ ಅಕ್ರಮವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ.ಪ್ರಕಾಶ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು.
ಹೋಂ ಸ್ಟೇಗೆಂದು ಸ.ನಂ 11/8 ಕ್ಕೆ ಪರವಾನಗಿ ಪಡೆದಿದ್ದು, ಮನೆ‌ ನಿವೇಶನಕ್ಕೆಂದು ಸರ್ವೆ ನಂ‌ 11/4 ರಲ್ಲಿ 0.20 ಸೆಂಟ್ ಜಾಗವನ್ನು ಭೂಪರಿವರ್ತನೆ ಮಾಡಿ ಅಲ್ಲಿ ಅನಧಿಕೃತವಾಗಿ ಹೋಂ ಸ್ಟೇ ನಡೆಸುತ್ತಾ ಬರುತ್ತಿದ್ದಾರೆ. ಈ ಹೋಂ ಸ್ಟೇಯಲ್ಲಿ ಅನಧಿಕೃತ ಚಟುವಟಿಕೆಗಳು ನಡೆಯುತ್ತಿವೆ. ರಾತ್ರಿ 1 ಗಂಟೆವರೆಗೆ ಅತಿಯಾದ ಡಿಜೆ ಶಬ್ಧ ಮೊಳಗುತ್ತದೆ. ಹೋಂ ಸ್ಟೇಗೆ ಬರುವ ಘನ ವಾಹನಗಳು ಕಿರಿದಾದ ರಸ್ತೆ‌ ಮಧ್ಯೆ‌‌ ನಿಲುಗಡೆಗೊಳ್ಳುವ ಕಾರಣ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಪ್ರವಾಸಿಗರು ಪಾನಮತ್ತರಾಗಿ ಹಲ್ಲೆಗೆ‌ ಮುಂದಾಗುತ್ತಾರೆ. ಹೋಂ ಸ್ಟೇ ಸಮೀಪದಲ್ಲಿ 40 ಕುಟುಂಬಗಳು ವಾಸವಾಗಿದ್ದು ಬಹುತೇಕ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇಲ್ಲಿನ ವಯಸ್ಕರು, ರೋಗಿಗಳು, ವಿದ್ಯಾರ್ಥಿಗಳಿಗೆ ಈ ಹೋಂ ಸ್ಟೇಯಿಂದ ತೀವ್ರ ಅನಾಕೂಲ‌ ಉಂಟಾಗುತ್ತಿದೆ ಎಂದು ಗ್ರಾಮಸ್ಥರಾದ ಡಿ.ಆರ್.ಪ್ರಭಾಕರ್, ಕೆ.ಪಿ.ರವಿ, ಕೆ.ಟಿ.ರವಿ ಮತ್ತಿತರರು ಆರೋಪಿಸಿದರು.
ಹೋಂ ಸ್ಟೇ ನಡೆಸಲು ಅನುಮತಿ‌ ಪಡೆದ ಜಾಗದಲ್ಲಿ ಹೋಂ ಸ್ಟೇ ನಡೆಸದೆ ಬೇರೆ ಸ್ಥಳದಲ್ಲಿ ನಡೆಸಲಾಗುತ್ತಿದೆ. ಹೋಂ ಸ್ಟೇಯಿಂದ ಕಲುಷಿತ ತ್ಯಾಜ್ಯವನ್ನು ಸಮೀಪದ ಕೆರೆಗೆ ಹರಿಸಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಕೂಡಲೇ ಈ ಹೋಂ ಸ್ಟೇಯನ್ನು ರದ್ದುಗೊಳಿಸುವಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಒತ್ತಾಯಿಸಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವ ಭರವಸೆ ನೀಡಿದರು.
ಕೂಡಲೆ ಹೋಂ‌ಸ್ಟೇ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು.‌ ತಪ್ಪಿದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ‌ ಮುಂದೆ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭ ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗೌತಮ್, ಗ್ರಾಪಂ ಸದಸ್ಯರಾದ ಭಾಗ್ಯ, ದಿನೇಶ್, ಮಾಜಿ ಸದಸ್ಯೆ ಅಶ್ವಿನಿ ಕುಮಾರ್, ಗ್ರಾಮಸ್ಥರಾದ ಬೀರೇಗೌಡ, ನಾಗಮ್ಮ, ಯಶೋದಾ, ಶೋಭಾ, ಶೇಖರ್, ಪಾರ್ವತಿ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!