ಹೊಸದಿಗಂತ ಡಿಜಿಟಲ್ ಡೆಸ್ಕ್
ಹಳಕ್ಕಲ್ ಚಂದು (ತಲಕ್ಕರ ಚಂದು) ಕೊಟ್ಟಾಯಂ ರಾಜವಂಶದ ರಾಜ ಕೇರಳ ವರ್ಮಾ ಪಝಸಿರಾಜನ ಅಳ್ವಿಕೆಯ ಕಾಲದಲ್ಲಿ ಬುಡಕಟ್ಟು ಸಮುದಾಯದ ಮುಖ್ಯಸ್ಥರಾಗಿದ್ದರು. ಅವರು 1779 ರಿಂದ 1805 ರವರೆಗೆ ಬ್ರಿಟಿಷರ ವಿರುದ್ಧ ನಿರಂತರ ಸಂಘರ್ಷ ನಡೆಸಿದ ವಯನಾಡಿನ ಕುರಿಚಿಯ ಸೈನ್ಯದ ಮುಖ್ಯಸ್ಥರಾಗಿದ್ದರು. ಈ ಕುರಿಚಿಯಾ ಬುಡಕಟ್ಟು ಜನರು ವಯನಾಡಿನಲ್ಲಿ ವ್ಯಾಪಕ ಭತ್ತದ ಕೃಷಿಯಲ್ಲಿ ತೊಡಗಿತ್ತು.
1802 ರಲ್ಲಿ ಮಲಬಾರ್‌ನ ಪ್ರಧಾನ ಕಲೆಕ್ಟರ್ ಮೇಜರ್ ವಿಲಿಯಂ ಮ್ಯಾಕ್ಲಿಯೋಡ್ ಜಾರಿಗೊಳಿಸಿದ್ದ ಕಂದಾಯ ವಸಾಹತು ಕಾಯ್ದೆ ಮಲಬಾರ್‌ನ ರೈತರಿಗೆ, ವಿಶೇಷವಾಗಿ ವಯನಾಡಿನ ಗುಡ್ಡಗಾಡು ಪ್ರದೇಶದ ಬುಡಕಟ್ಟು ರೈತರಿಗೆ ಮಾರಕವಾಗಿ ಪರಿಣಮಿಸಿತ್ತು. ಭ್ರಷ್ಟ ಅಧಿಕಾರಿಗಳು ಅವೈಜ್ಞಾನಿಕ ಕಂದಾಯ ಸಮೀಕ್ಷೆ ನಡೆಸಿ ರೈತರನ್ನು ಸುಲಿಯುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿ ಉತ್ಪದಿಸುವ ಕೃಷಿ ಉತ್ಪನ್ನಗಳ 20 ಪ್ರತಿಶತ ಪಾಲನ್ನು ಅಧಿಕಾರಿಗಳಿಗೆ ನೀಡಬೇಕಾಗಿತ್ತು. ಅಕ್ಕಿ ಉತ್ಪಾದನೆಯ ಮೇಲೆ ಸರ್ಕಾರ 35 ರಿಂದ 40 ಪ್ರತಿಶತದಷ್ಟು ತೆರಿಗೆ ವಿಧಿಸಿಸಿ ಶೋಷಿಸುತ್ತಿತ್ತು. ಬ್ರಿಟಿಷ್ ಪೋಲೀಸ್ ಮತ್ತು ಕಂದಾಯ ಅಧಿಕಾರಿಗಳು ರೈತರು ಸಂಗ್ರಹಿಸಿಟ್ಟ ಭತ್ತವನ್ನು ಹಿಡಿಯಲು ಕುರಿಚಿಯಾ ಆದಿವಾಸಿಗಳ ಮನೆಗಳ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿದ್ದರು. ಬುಡಕಟ್ಟು ಜನರನ್ನು ಬ್ರಿಟಿಷ್ ಅಧಿಕಾರಿಗಳು ಹೀನವಾಗಿ ನಡೆಸಿಕೊಂಡರು ಮತ್ತು ಅವಮಾನಿಸಿದರು. ಈ ಕಾರಣದಿಂದ ಸಿಡಿದೆದ್ದ ಕುರಿಚಿಯ ಬುಡಕಟ್ಟು ಜನರು ಹಳಿಕಲ್ ಚಂದು ನೇತೃತ್ವದಲ್ಲಿ 1802 ರ ಅಕ್ಟೋಬರ್ 11 ರ ರಾತ್ರಿ ವಯನಾಡಿನ ಪನಮರಂನಲ್ಲಿ ಬ್ರಿಟಿಷರ ಮಿಲಿಟರಿ ಕ್ಯಾಂಪ್ ಮೇಲೆ ದಾಳಿ ಮಾಡಿದರು.
ಸುಮಾರು 150 ಕುರಿಚಿಯ ಸೈನಿಕರು ಬಿಲ್ಲು ಮತ್ತು ಬಾಣಗಳೊಂದಿಗೆ ಬ್ರಿಟಿಷ್ ಮಿಲಿಟರಿ ಶಿಬಿರದ ಮೇಲೆ ದಾಳಿ ಮಾಡಿದರು. ಕ್ಯಾಪ್ಟನ್ ಡಿಕನ್ಸನ್ ಮತ್ತು ಲೆಫ್ಟಿನೆಂಟ್ ಮ್ಯಾಕ್ಸ್‌ವೆಲ್ ನೇತೃತ್ವದಲ್ಲಿ ಪನಾಮಾರ್ಮ್ ಕೋಟೆಯಲ್ಲಿ ಬಾಂಬೆ ಪದಾತಿದಳದ ಮೊದಲ ಬೆಟಾಲಿಯನ್ ಸೇನಾ ತುಕಡಿಯು ನೆಲೆಗೊಂಡಿತ್ತು. ಕುರಿಚಿಯಾಸ್ ಸೈನಿಕರ ದಾಳಿಯಲ್ಲಿ ಕ್ಯಾಪ್ಟನ್ ಡಿಕನ್ಸನ್ ಮತ್ತು ಲೆಫ್ಟಿನೆಂಟ್ ಮ್ಯಾಕ್ಸ್ವೆಲ್ ಸೇರಿದಂತೆ ಎಲ್ಲಾ 70 ಸೈನಿಕರು ಕೊಲ್ಲಲ್ಪಟ್ಟರು. ದಾಳಿಯ ನಂತರ, ಬಂಡುಕೋರರು 112 ಶಸ್ತ್ರಾಸ್ತ್ರಗಳು, 6 ಮದ್ದುಗುಂಡುಗಳು ಮತ್ತು 6000 ರೂ. ಹಣ, ಶಿಬಿರದ ಎಲ್ಲಾ ಕಟ್ಟಡಗಳನ್ನು ನಾಶಗೊಳಿಸಿದರು. ಮತ್ತು ಸೈನಿಕರು ಪನಮರಮ್ನಲ್ಲಿನ ಕಂಟೋನ್ಮೆಂಟ್ ಅನ್ನು ಸುಟ್ಟುಹಾಕಿದರು. ಈ ದಾಳಿಯಲ್ಲಿ ಐದು ಕುರಿಚಿಯರು ಸಾವನ್ನಪ್ಪಿದರು ಮತ್ತು ಅವರಲ್ಲಿ 10 ಮಂದಿ ಗಾಯಗೊಂಡರು. ಈ ದಾಳಿ ಮತ್ತು ಸೋಲು ದಕ್ಷಿಣ ಭಾರತದಲ್ಲಿ ಬ್ರಿಟಿಷ್ ಆಡಳಿತಕ್ಕೆ ದೊಡ್ಡ ಮುಜುಗರವನ್ನು ಉಂಟುಮಾಡಿತ್ತು.
1805 ರ ನವೆಂಬರ್ 14 ರಂದು ಘೋರ ಯುದ್ಧದ ನಂತರ ಬ್ರಿಟಿಷ್ ಸೈನ್ಯವು ಕುರಿಚಿಯ ನಾಯಕ ತಲಕ್ಕಲ್ ಚಂದುವನ್ನು ವಶಕ್ಕೆ ಪಡೆಯಿತು. ಬ್ರಿಟೀಷರು ಪ್ರತೀಕಾರ ರೂಪದಲ್ಲಿ ತಲಕ್ಕಲ್ ಚಂದುಗೆ ಪನಮರಮ್ ಕೋಟೆಯಲ್ಲಿ ಕ್ರೂರ ಚಿತ್ರಹಿಂಸೆ ನೀಡಿ 15 ನವೆಂಬರ್ 1805 ರಂದು ಸಾರ್ವಜನಿಕವಾಗಿ ಗಲ್ಲಿಗೇರಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ