Sunday, December 4, 2022

Latest Posts

ಹಿಜಾಬ್‌ ವಿರೋಧಿಸಿ ಇರಾನ್ ಮಹಿಳೆಯರ ಹೋರಾಟಕ್ಕೆ ಬೆಂಬಲ: ಕೂದಲಿಗೆ ಕತ್ತರಿ ಹಾಕಿದ ಊರ್ವಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಡ್ಡಾಯವಾಗಿ ಹಿಜಾಬ್‌ ಧರಿಸುವ ನೀತಿಯ ವಿರುದ್ಧ ಸಿಡಿದೆದ್ದಿರುವ ಇರಾನ್​ ಮಹಿಳೆಯರು ಕಳೆದ ಒಂದು ತಿಂಗಗಳಿಂದ ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್‌ ಮಹಿಳೆಯರ ಹೋರಾಟಕ್ಕೆ ಜಗತ್ತಿನ ಎಲ್ಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ವಿಶ್ವದ ಖ್ಯಾತನಾಮ ಸೆಲೆಬ್ರಿಟಿಗಳು ತಮ್ಮ ಕೇಶಕ್ಕೆ ಕತ್ತರಿ ಹಾಕುವ ಮೂಲಕ ಮಹಿಳೆಯರ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಹ ಇರಾನ್‌ನ ಮಹಿಳೆಯನ್ನು ಬೆಂಬಲಿಸಲು ಮತ್ತು ಉತ್ತರಾಖಂಡದ ಯುವತಿ ಅಂಕಿತಾ ಭಂಡಾರಿ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ತಮ್ಮ ಕೂದಲನ್ನು ಕತ್ತರಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇರಾನ್‌ನಲ್ಲಿ ಕಟ್ಟುನಿಟ್ಟಾದ ಹಿಜಾಬ್‌ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನೈತಿಕ ಪೊಲೀಸರು ಟೆಹ್ರಾನ್‌ ನಲ್ಲಿ 22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿಯನ್ನು ಕೊಂದ ಘಟನೆ ಇರಾನ್‌ನಲ್ಲಿ ಪ್ರತಿಭಟನೆಗಳನ್ನು ಪ್ರೇರೇಪಿಸಿತು. ಪ್ರಪಂಚದಾದ್ಯಂತ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಇರಾನ್ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.
ಇರಾನಿನ ನೈತಿಕತೆಯ ಹೆಸರಿನಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟ ಮಹ್ಸಾ ಅಮಿನಿಯ ಸಾವಿಗೆ ನ್ಯಾಯ ಕೇಳುತ್ತಿರುವ ಇರಾನಿನ ಮಹಿಳೆಯರು ಮತ್ತು ಹುಡುಗಿಯರನ್ನು ಬೆಂಬಲಿಸಲು ನಾನು ನನ್ನ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದೇನೆ. ಜೊತೆಗೆ 19 ವರ್ಷದ ಉತ್ತರಾಖಂಡದ ಹುಡುಗಿ ಅಂಕಿತಾ ಭಂಡಾರಿ ಸಾವಿಗೆ ನ್ಯಾಯಕೋರುತ್ತಿದ್ದೇನೆ. ಪ್ರಪಂಚದಾದ್ಯಂತ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಇರಾನ್ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಮಹಿಳೆಯರನ್ನು ಗೌರವಿಸಿ ಎಂದು ಬರೆದುಕೊಂಡಿದ್ದಾರೆ.
ಕೂದಲನ್ನು ಮಹಿಳೆಯರ ಸೌಂದರ್ಯದ ಸಂಕೇತವಾಗಿ ನೋಡಲಾಗುತ್ತದೆ. ಸಾರ್ವಜನಿಕವಾಗಿ ಕೂದಲನ್ನು ಕತ್ತರಿಸುವ ಮೂಲಕ ನಮ್ಮ ಬದುಕನ್ನು ಬೇರೆಯವರು ನಿರ್ದೇಶಿಸಬೇಡಿ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ. ಸ್ತ್ರೀಯರು ತಮ್ಮ ಮೇಲಿನ ದಬ್ಬಾಳಿಕೆಗಳನ್ನು ಒಟ್ಟಾಗಿ ಪ್ರತಿಭಟಿಸಿದರೆ ಸ್ತ್ರೀವಾದವು ಹೊಸ ಚೈತನ್ಯವನ್ನು ಪಡೆಯುತ್ತದೆ ಎಂದು ಊರ್ವಶಿ ಇನ್ಸ್ಟಾ ಗ್ರಾಮ್‌ ನಲ್ಲಿ ಪ್ರಕಟಿಸಿದ್ದಾರೆ.
ಇದಕ್ಕೂ ಮೊದಲು, ಆಸ್ಕರ್ ಪ್ರಶಸ್ತಿ ವಿಜೇತ ನಟರಾದ ಮರಿಯನ್ ಕೊಟಿಲಾರ್ಡ್, ಜೂಲಿಯೆಟ್ ಬಿನೋಚೆ ಸೇರಿದಂತೆ ಫ್ರೆಂಚ್ ಪರದೆಯ ಮತ್ತು ಸಂಗೀತ ತಾರೆಯರು ಇರಾನ್‌ನಲ್ಲಿ ಪ್ರತಿಭಟನಾಕಾರರನ್ನು ಬೆಂಬಲಿಸಲು ತಮ್ಮ ಕೂದಲನ್ನು ಕತ್ತರಿಸುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!