June 1, 2026
Monday, June 1, 2026
spot_img

ಮತ್ತೆ ಕೆರಳಿದ ಅಮೆರಿಕ-ಇರಾನ್ ಯುದ್ಧದ ಕಿಡಿ: ಇರಾನ್ ದ್ವೀಪಗಳ ಮೇಲೆ ಸೆಂಟ್ಕಾಮ್ ಭೀಕರ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರಿದೆ. ವಾರಾಂತ್ಯದಲ್ಲಿ ಅಮೆರಿಕದ ಸೇನೆಯು ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಬೃಹತ್ ರಕ್ಷಣಾತ್ಮಕ ದಾಳಿ ನಡೆಸಿದೆ. ಇರಾನ್‌ನ ಗೊರುಕ್ ಮತ್ತು ಕ್ವೆಶ್ಮ್ ದ್ವೀಪಗಳಲ್ಲಿರುವ ರಾಡಾರ್ ಹಾಗೂ ಡ್ರೋನ್ ನಿಯಂತ್ರಣ ಕೇಂದ್ರಗಳನ್ನೇ ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಅಧಿಕೃತವಾಗಿ ಪ್ರಕಟಿಸಿದೆ.

ದಾಳಿಗೆ ಅಸಲಿ ಕಾರಣವೇನು?

ಕೆಲ ದಿನಗಳ ಹಿಂದೆ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಅತ್ಯಾಧುನಿಕ ‘ಎಂಕ್ಯೂ-1’ (MQ-1) ಡ್ರೋನ್ ಅನ್ನು ಇರಾನ್ ಸೇನೆ ಹೊಡೆದುರುಳಿಸಿತ್ತು. ಇರಾನ್‌ನ ಈ ಪ್ರಚೋದನಾತ್ಮಕ ನಡೆಗೆ ತಕ್ಕ ತಿರುಗೇಟು ನೀಡಲು ಅಮೆರಿಕ ಈ ಕಾರ್ಯಾಚರಣೆ ರೂಪಿಸಿತ್ತು ಎಂದು ಸೆಂಟ್ಕಾಮ್ ತಿಳಿಸಿದೆ.

ಅಮೆರಿಕ ದಾಳಿಯಿಂದಾದ ನಷ್ಟಗಳೇನು?

ಯುಎಸ್ ಸೇನೆ ನಡೆಸಿದ ಈ ನಿಖರ ದಾಳಿಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ ಮತ್ತು ಡ್ರೋನ್ ನಿಯಂತ್ರಣ ಕೇಂದ್ರಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಅಷ್ಟೇ ಅಲ್ಲದೆ, ದಾಳಿಗೆ ಸಜ್ಜಾಗಿದ್ದ ಇರಾನ್‌ನ ಎರಡು ಡ್ರೋನ್‌ಗಳನ್ನು ಸಹ ನಾಶಪಡಿಸಲಾಗಿದೆ. ಈ ಇಡೀ ಕಾರ್ಯಾಚರಣೆಯಲ್ಲಿ ಅಮೆರಿಕದ ಯಾವುದೇ ಸೇನಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ಮುಂದುವರಿದ ಹಳೇ ವೈಷಮ್ಯ:

ಕಳೆದ ವಾರವಷ್ಟೇ ಹೋರ್ಮುಜ್ ಜಲಸಂಧಿ ಬಳಿ ಇರಾನ್‌ನ ಡ್ರೋನ್ ಕಾರ್ಯಾಚರಣೆಯನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಅಮೆರಿಕದ ಸೇನಾ ನೆಲೆಯೊಂದರ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು. ಇದೀಗ ವಾರಾಂತ್ಯದಲ್ಲಿ ನಡೆದಿರುವ ದಾಳಿ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿಶೇಷವೆಂದರೆ, ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ವಿಸ್ತರಣೆ ಹಾಗೂ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಕುರಿತು ಶಾಂತಿ ಮಾತುಕತೆಗಳು ನಡೆಯುತ್ತಿವೆ. ಇಂತಹ ಸೂಕ್ಷ್ಮ ಸಮಯದಲ್ಲಿ ನಡೆದಿರುವ ಈ ಮಿಲಿಟರಿ ದಾಳಿ ಜಾಗತಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !