Monday, December 11, 2023

Latest Posts

ಪರಂಪರಾಗತವಾಗಿ ಬಂದ ಪ್ರಾಣಿ ಉತ್ಪನ್ನಗಳ ಬಳಕೆ ಅಪರಾಧವಲ್ಲ: ಎ.ಎಸ್.ಪೊನ್ನಣ್ಣ

ಹೊಸದಿಗಂತ ವರದಿ ಮಡಿಕೇರಿ:

ಪ್ರಾಣಿಗಳನ್ನು ಬೇಟೆಯಾಡಿ ಅದರ ಉತ್ಪನ್ನಗಳನ್ನು ಬಳಸಿದರೆ ಮಾತ್ರ ಅಪರಾಧವೇ ಹೊರತು, ಪೂರ್ವಜರಿಂದ ಬಂದ ಉತ್ಪನ್ನಗಳ ಬಳಕೆ ಅಪರಾಧವಲ್ಲ ಎಂದು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸ್ಪಷ್ಟಪಡಿಸಿದರು.

ಕೊಡಗಿನಲ್ಲಿ ಪಾರಂಪರಿಕವಾಗಿ ಆನೆದಂತ, ಜಿಂಕೆ ಕೊಂಬು ಸೇರಿದಂತೆ ಹಲವು ಪ್ರಾಣಿಗಳ ಉತ್ಪನ್ನಗಳನ್ನು ಹಿಂದಿನಿಂದಲೂ ಬಳಸಲಾಗುತ್ತಿದ್ದು, ಊರಿನ ಉತ್ಸವಗಳ ಸಂದರ್ಭ ಜಿಂಕೆ ಕೊಂಬು ಬಳಸಿ ಕೊಂಬಾಟ್ ಎಂಬ ನೃತ್ಯವನ್ನೂ ಪ್ರದರ್ಶಿಸಲಾಗುತ್ತಿದೆ. ಇತ್ತೀಚೆಗೆ ಹುಲಿ ಉಗುರು ಧರಿಸಿದ್ದವರ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಜ‌ನತೆ ಆತಂಕಕ್ಕೆ ಒಳಗಾಗಿದ್ದರು. ಈ ಸಂಬಂಧವಾಗಿ ಸ್ಪಷ್ಟನೆ ನೀಡುವಂತೆ ಅಖಿಲ ಕೊಡವ ಸಮಾಜದ ಪ್ರಮುಖರು ಶಾಸಕರ ಗಮನಸೆಳೆದಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಪೊನ್ನಣ್ಣ, ವನ್ಯಪ್ರಾಣಿಗಳ ಬೇಟೆ ಕಾನೂನಿನ ಅನ್ವಯ ನಿಷೇಧ. ಬೇಟೆ ಮಾಡಿದ ಪ್ರಾಣಿಗಳ ಉತ್ಪನ್ನ ಬಳಸುವುದೂ ಅಪರಾಧ.‌ ಆದರೆ ವನ್ಯಜೀವಿಗಳ ಉತ್ಪನ್ನ ಪರಂಪರಾಗತವಾಗಿ ಹಿರಿಯರಿಂದ ಬಂದಿದ್ದರೆ ಅದನ್ನು ಬಳಸುವುದಕ್ಕೆ ಕಾನೂನಿನಡಿ ಅವಕಾಶವಿದೆ ಎಂದು ವಿವರಿಸಿದರು.

ʻಜಿಂಕೆ ಕೊಂಬನ್ನು ಮನೆಯಲ್ಲಿಡಬಹುದು. ನವಿಲು ಗರಿ ತಾನಾಗಿ ಬಿದ್ದಿದ್ದರೆ ಅದನ್ನೂ ಇಟ್ಟುಕೊಳ್ಳಬಹುದುʼ ಎಂದು ಸ್ಪಷ್ಟಪಡಿಸಿದ ಪೊನ್ನಣ್ಣ, ಈ ವಿಚಾರವಾಗಿ ಕೊಡಗಿನ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದರು.

ನಟ ಜಗ್ಗೇಶ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ತಡೆಯಾಜ್ಞೆ ಕೂಡಾ ನೀಡಿದೆ. ಅರಣ್ಯ ಅಧಿಕಾರಿಗಳು ಮೊದಲು ಕಾನೂನು ತಿಳಿದುಕೊಳ್ಳಬೇಕು. ಸರಕಾರ ಅರಣ್ಯಾಧಿಕಾರಿಗಳಿಗೆ ಸರಿಯಾದ ನಿರ್ದೇಶನ ನೀಡಬೇಕಾಗಿದೆ. ಇವರಿಗೆ ಎಫ್ಐಆರ್ ಮಾಡುವ ಅಧಿಕಾರ ಇಲ್ಲ. ಕಾನೂನು ವ್ಯಾಪ್ತಿ ಮೀರಿ ಎಫ್.ಐ.ಆರ್ ಮಾಡಲಾಗುತ್ತಿದೆ ಎಂದೂ ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಪೂರ್ವಜರ ಕಾಲದಿಂದಲೂ ಪಾರಂಪರಿಕವಾಗಿ ವನ್ಯ ಜೀವಿಗಳ ವಸ್ತುಗಳನ್ನು ಬಳಸಲಾಗುತ್ತಿದೆ. ಇದು ಹೀಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿದ‌ ಅವರು, ಇದಕ್ಕೆ ಕಾನೂನಿನಡಿ ರಕ್ಷಣೆ ಇದೆ ಎಂದರು.

ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮೂಲಕ ಪರಿಹಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದ ಪೊನ್ನಣ್ಣ, ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ಆಗಿ ಗೊಂದಲ ಪರಿಹಾರ ಆಗುವ ತನಕ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬಾರದು ಎಂದು ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!