ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸೋಂದಾ ಸ್ವರ್ಣವಲ್ಲೀ ಶ್ರೀ ಬೆಂಬಲ

ಹೊಸ ದಿಗಂತ ವರದಿ, ಶಿರಸಿ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳಿಗೆ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ತಮ್ಮ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಜು.30ರಂದು ಆಯೋಜಿಸಿರುವ ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಗೆ ಅತ್ಯವಶ್ಯವಾಗಿದೆ ಎಂದಿದ್ದಾರೆ. ನಾಡಿನ ಸರ್ವತೋಮುಖವಾದ ಅಭಿವೃದ್ಧಿಗೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾದದ್ದು. ಈ ಜಿಲ್ಲೆಯ ಜನರ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರದಿಂದ ಅಪೇಕ್ಷಿಸುತ್ತಿರುವ ಅತ್ಯಂತ ಮೂಲಭೂತ ಹಾಗೂ ಅನಿವಾರ್ಯವಾದ ವ್ಯವಸ್ಥೆ ಎಂದರೆ ಅದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಎಂದು ಹೇಳಿದ್ದಾರೆ.
ದಿನೇ ದಿನೇ ಆತಂಕಕಾರಿ ರೋಗಗಳು ಹಾಗೂ ಭಯಂಕರವಾದ ಅಪಘಾತಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ತುರ್ತಾಗಿ ಚಿಕಿತ್ಸೆ ಹಾಗೂ ವೈದ್ಯೋಪಚಾರವನ್ನು ಒದಗಿಸುವ ಮೂಲಭೂತ ವ್ಯವಸ್ಥೆಯು ಇಲ್ಲವಾದಾಗ ಜನರಲ್ಲಿ ಸಹಜವಾಗಿ ಆತಂಕ ಉಂಟಾಗುತ್ತದೆ. ದೂರದ ಆಸ್ಪತ್ರೆಗಳಿಗೆ ಹೋಗುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿಯೇ ಪ್ರಾಣ ಹಾನಿಯಾಗಿರುವ ಅನೇಕ ಘಟನೆಗಳು ನಮ್ಮ ಮುಂದೆ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ತುರ್ತಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತವಾದ ಮಲ್ಟಿ ಸ್ಥೆಷಾಲಿಟಿ ಆಸ್ಪತ್ರೆಯ ನಿರ್ಮಾಣವು ಆಗಬೇಕಿದೆ ಎಂದಿದ್ದಾರೆ.
ಪ್ರಾಮಾಣಿಕವಾದ ಈ ಬೇಡಿಕೆಯು ಪ್ರತಿಭಟನಾ ಸ್ವರೂಪವನ್ನು ಪಡೆದುಕೊಳ್ಳದಂತೆ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ ಎಂದಿರುವ ಅವರು, ಉತ್ತರಕನ್ನಡ ಜಿಲ್ಲೆಯ ಸಮಗ್ರ ಜನತೆಯ ಒತ್ತಾಯ ಪೂರ್ವಕವಾದ ಈ ಬೇಡಿಕೆಯನ್ನು ಸರ್ಕಾರಕ್ಕೆ ಪರಿಣಾಮಕಾರಿಯಾಗಿ ತಲುಪಿಸಬೇಕಿದೆ. ಈ ಉದ್ದೇಶದಿಂದ ಜು.30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾದ ಮೌನ ಪ್ರತಿಭಟನೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರಕನ್ನಡ ಜಿಲ್ಲೆಯ ಎಲ್ಲರೂ ತಮ್ಮ ಜಿಲ್ಲೆ ಎಂಬ ಅಭಿಮಾನದಿಂದ ಪಾಲ್ಗೊಂಡು, ಸರ್ಕಾರಕ್ಕೆ ಈ ಜಿಲ್ಲೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವಂತಾಗಬೇಕು ಎಂದು ಶ್ರೀಗಳು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!