ಎಲ್ಲಾ 41 ಕಾರ್ಮಿಕರು ಆರೋಗ್ಯವಾಗಿದ್ದಾರೆ, ಭಯಪಡುವ ಅಗತ್ಯವಿಲ್ಲ- ಡಾ.ಬಿಮ್ಲೇಶ್ ಜೋಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರಂತರ ಶ್ರಮ, ದೇಶದ ಜನರ ಪ್ರಾರ್ಥನೆಗಳು ಫಲಿಸಿ ಸುರಂಗದಲ್ಲಿ ಸಿಲುಕಿದ್ದ 41 ಜನರು ಜೀವಂತವಾಗಿ ಹೊರಬಂದರು. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಉತ್ತರಕಾಶಿ ಆರೋಗ್ಯಾಧಿಕಾರಿ ಡಾ.ಬಿಮ್ಲೇಶ್ ಜೋಶಿ ತಿಳಿಸಿದರು.

ʻಎಲ್ಲಾ 41 ಕಾರ್ಮಿಕರು ಪ್ರಸ್ತುತ ಆರೋಗ್ಯವಾಗಿದ್ದಾರೆ, ರಕ್ಷಣೆಯ ಬಳಿಕ ಎಲ್ಲರ ಆರೋಗ್ಯ ತಪಾಸಣೆಯನ್ನು ಎರಡು ಬಾರಿ ಮಾಡಲಾಗಿದೆ, ಚಿನ್ಯಾಲಿಸೌರ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ವೈದ್ಯರ ತಂಡ ಕಳೆದ ರಾತ್ರಿಯಿಂದ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿದ್ದಾರೆʼ ಎಂದರು.

ಈ ಪೈಕಿ 10 ಮಂದಿ ಜಿಡಿಎಂಒಗಳು, ಉಳಿದ 8 ಮಂದಿ ತಜ್ಞರು ತಪಾಸಣೆ ನಡೆಸಿದರು. ಜೊತೆಗೆ 50ಮಂದಿ ಅರೆವೈದ್ಯಕೀಯ ಸಿಬ್ಬಂದಿ ಕಳೆದ ರಾತ್ರಿಯಿಂದ 41 ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಪನೀರ್, ಬೇಯಿಸಿದ ಮೊಟ್ಟೆ, ಖೀರ್, ರೊಟ್ಟಿ, ತರಕಾರಿ ಮತ್ತು ಅನ್ನವನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ನೀಡಲಾಗಿದೆ ಎಂದು ಜೋಶಿ ತಿಳಿಸಿದರು.

ಹೆಚ್ಚಿನ ತಪಾಸಣೆಗಾಗಿ ಎಲ್ಲರನ್ನು ರಿಷಿಕೇಶದ ಏಮ್ಸ್‌ಗೆ ಕಳಿಸಲು ಸಿದ್ದತೆಗಳು ನಡೆಯುತ್ತಿವೆ. ಕಾರ್ಮಿಕರನ್ನು ಚಿನೂಕ್ ಹೆಲಿಕಾಪ್ಟರ್ ಮೂಲಕ ಮತ್ತವರ ಕುಟುಂಬ ಸದಸ್ಯರನ್ನು ಆಂಬ್ಯುಲೆನ್ಸ್ ಅಥವಾ ಇನ್ನಾವುದೇ ವಾಹನದ ಮೂಲಕ ಕಳುಹಿಸಬಹುದು. ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲದಿದ್ದರೂ, ಸುರಕ್ಷಿತ ವೀಕ್ಷಣೆಯಲ್ಲಿರಿಸುವುದು ಒಳಿತು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!