ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದಲ್ಲಿ ಸದ್ದು ಮಾಡಿರುವ ಕಾಂತಾರ’ ಸಿನಿಮಾ ವಿರುದ್ಧ ಇತ್ತೀಚೆಗೆ ‘ವರಾಹ ರೂಪಂ’ ಹಾಡಿನ ಟ್ಯೂನ್ ಅನ್ನು ಕದಿಯಲಾಗಿದೆ ಎಂದು ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಆರೋಪಿಸಿ ದೂರು ನೀಡಿತ್ತು. ಈ ದೂರಿಗೆ ಸಂಬಂಧಿಸಿದಂತೆ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಈ ವೇಳೆ ನ್ಯಾಯಾಲಯ ಕೆಲವು ಷರತ್ತುಗಳನ್ನು ಇಟ್ಟಿದ್ದು, ಎರಡು ದಿನಗಳ ಕಾಲ ಅಂದರೆ ಫೆ.12 ಮತ್ತು 13 ರಂದು ವಿಚಾರಣೆಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ತನಿಖಾಧಿಕಾರಿಯು ಅವರನ್ನು ವಿಚಾರಣೆಗೆ ಒಳಪಡಿಸಿ, ಒಂದು ವೇಳೆ ಬಂಧಿಸಿದರೆ ನ್ಯಾಯವ್ಯಾಪ್ತಿಯ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ನಂತರ 50 ಸಾವಿರ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಕೋರ್ಟ್ ಜಾಮೀನು ನೀಡಬೇಕು.
ಅದೇ ರೀತಿಅರ್ಜಿದಾರರನ್ನು ಹಾಗೂ ಸಾಕ್ಷಿಗಳನ್ನು ಬೆದರಿಸಬಾರದು ಮತ್ತು ಸಾಕ್ಷ್ಯ ನಾಶ ಮಾಡುವಂತಹ ಕೆಲಸಕ್ಕೆ ಕೈ ಹಾಕಬಾರದು. ಹಾಗೂ ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಪೂರ್ವಾನುಮತಿಯಿಲ್ಲದೇಭಾರತವನ್ನು ತೊರೆಯುವಂತಿಲ್ಲ ಎಂದು ಹೇಳಿದೆ.
ಹಾಗೆಯೇ ಜಾಮೀನು ಪಡೆದ ಸಮಯದಲ್ಲಿ ಆರೋಪಿಗಳು ಯಾವುದೇ ಅಪರಾಧದ ಕೃತ್ಯದಲ್ಲಿ ಭಾಗಿಯಾಗುವಂತಿಲ್ಲ. ಅಂತಹ ಘಟನೆಗಳು ನಡೆದಿರುವುದು ಕೋರ್ಟ್ ಗಮನಕ್ಕೆ ಬಂದರೆ, ಜಾಮೀನನ್ನು ರದ್ದುಗೊಳಿಸಲಾಗುವುದು ಎಂದು ಸೂಚಿಸಿದೆ.