ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹಿರಿಯ ಪತ್ರಕರ್ತ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ವಸಂತ ನಾಡಿಗೇರ (59) ಸೋಮವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂರುವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವಸಂತ್ ನಾಡಿಗೇರ ಅವರು ಪನ್ ಹೆಡ್ಡಿಂಗ್ಗಳ ಮೂಲಕವೇ ಜನಪ್ರಿಯರಾಗಿದ್ದರು. ವಸಂತ ನಾಡಿಗೇರ ಅವರು ಕನ್ನಡ ಪ್ರಭ, ವಿಜಯಕರ್ನಾಟಕ, ವಿಶ್ವವಾಣಿ ನಂತರ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.
ವಸಂತ ನಾಡಿಗೇರ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಇಲ್ಲಿಯೇ ಪ್ರಾಥಮಿಕ ಶಿಕ್ಷಣ, ಪೌಢ ಶಿಕ್ಷಣ ಪಡೆದು ಧಾರವಾಡದಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದರು. ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಜೀವನ ಆರಂಭಿಸಿದ ವಸಂತ ನಾಡಿಗೇರ ಅವರು ಕನ್ನಡಪ್ರಭ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ವಿಜಯ ಕರ್ನಾಟಕದಲ್ಲಿದ್ದಾಗ ಅವರ ಬಡಿಗೇರ್ ಹಾಗೂ ನಾಡಿಗೇರ್ ಎನ್ನುವ ಹಾಸ್ಯ ಅಂಕಣವೂ ಜನಪ್ರೀಯವಾಗಿತ್ತು. ಸದ್ಯ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಲಭಿಸಿದೆ.