Monday, March 27, 2023

Latest Posts

ವಿಜಯ ಸಂಕಲ್ಪ ಯಾತ್ರೆ: ಇದು ಬದಲಾವಣೆಯ ದಾರಿ ಎಂದ ಮಾಜಿ ಸಿಎಂ ಜಗದೀಶ ಶೆಟ್ಟರ್!

ಹೊಸದಿಗಂತ ವರದಿ, ವಿಜಯಪುರ:

ರಾಜ್ಯದಲ್ಲಿ ನಾಲ್ಕು ದಿಕ್ಕಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭಿಸಿದೆ. ಇದು ಬದಲಾವಣೆಯ ದಾರಿಯಾಗಿದ್ದು, ಭಾರೀ ಬೆಂಬಲ ಸಿಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ವರ್ಷದ ಸಾಧನೆಯನ್ನು ಇದೀಗ ಜನರ ಮುಂದೆ ಇಡುತ್ತಿದ್ದೇವೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳಿಂದ ನಮಗೆ ಬೆಂಬಲ ಸಿಕ್ಕಿದೆ. ಫಲಾನುಭವಿಗಳ ಸಮಾವೇಶದಲ್ಲಿ 40 ರಿಂದ 50 ಸಾವಿರ ಫಲಾನುಭವಿಗಳು ಇರ್ತಾರೆ ಎಂದರೆ ಸರ್ಕಾರದ ಸಾಧನೆ ಗೊತ್ತಾಗುತ್ತದೆ. 14 ನೇ ಸ್ಥಾನದಿಂದ ಭಾರತ 5 ನೇ ಸ್ಥಾನಕ್ಕೆ ಬಂದಿದೆ ಅಂದರೆ ಭಾರತದ ಸಾಧನೆ ಹೇಗಿದೆ ಎಂಬುದು ತಿಳಿಯುತ್ತದೆ ಎಂದರು.

ಕೊರೋನಾ ಸಂದರ್ಭ ಎಲ್ಲ ದೇಶಗಳಲ್ಲಿ ಚಟುವಟಿಕೆಗಳು ಸ್ಥಗಿತವಾಗಿವೆ. ಆದರೆ, ಭಾರತದಲ್ಲಿ ಅದನ್ನು ನಿಯಂತ್ರಣ ಮಾಡುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದರು.
ಭಾರತದಲ್ಲಿ ಕೋಟ್ಯಾಂತರ ಜನರಿಗೆ ಉಚಿತವಾಗಿ ಲಸಿಕೆ ಕೊಟ್ಟಿದ್ದಾರೆ. ಹೀಗಾಗಿ ಭಾರತವನ್ನು ಪ್ರಧಾನಿ ಮೋದಿ ಕೊರೋನಾ ಮುಕ್ತ ಮಾಡಿದ್ದಾರೆ. ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ಅಧೋಗತಿಗೆ ಹೋಗಿದೆ. ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯುನಲ್ಲಿ ಹೋಗಿದೆ. ಡಿ.ಕೆ. ಶಿವಕುಮಾರ, ಸಿದ್ರಾಮಯ್ಯ ಸೇರಿದಂತೆ ಹಲವರು ಐಸಿಯೂ ನಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ. ಅದು ಐಸಿಯುನಿಂದ ಹೊರಗೆ ಬರೋದಿಲ್ಲ. ಕೆಲವರು ಕಾಂಗ್ರೆಸ್ ನಿಂದ ಸಿಎಂ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ. ಅದು ಆಗೋದಿಲ್ಲ. ಬಿಜೆಪಿ 104 ರಿಂದ 140 ಸೀಟ್ ಪಡೆದು ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದರು.

ಸಂಸದೆ ಸುಮಲತಾ ಅವರು ಪ್ರಧಾನಿ ಮೋದಿ ಅವರ ಸರ್ಕಾರಕ್ಕೆ ಬೆಂಬಲ ಕೊಡುತ್ತ ಬಂದಿದ್ದಾರೆ. ಬಿಜೆಪಿಗೆ ಅವರ ಬೆಂಬಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, 1984-85 ರಲ್ಲಿ ನಾನು ಅದರ ಬಗ್ಗೆ ಪ್ಲಾನ್ ಮಾಡಿದೆ. ನಾನು ಮಂತ್ರಿ ಆದ ಬಳಿಕ 725 ಎಕರೆ ಭೂಮಿ ತಗೊಂಡು ವಿಮಾನ ನಿಲ್ದಾಣ ಮಾಡೋಕೆ ಮುಂದಾಗಿದ್ವಿ. ಆದರೆ ಕಾಂಗ್ರೆಸ್ ನವರು ಅಧಿಕಾರಲ್ಲಿದ್ದಾಗ ಮಾಡಲು ಬಿಡಲಿಲ್ಲ ಎಂದು ವಾಗ್ದಾಳಿ ನಡೆಸಿ, ಅಲ್ಲದೇ, ಶೀಘ್ರದಲ್ಲೇ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ ಎಂದರು.

ಹಿಂದುತ್ವದ ನಾಯಕ ಯಾರಾದ್ರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ. ಬಿಜೆಪಿ ಪಕ್ಷ ಸಮರ್ಥ ಇದೆ. ಅದು ಟಿಕೆಟ್ ನೀಡುವ ನಿರ್ಣಯ ಮಾಡುತ್ತದೆ ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಮುರುಗೇಶ ನಿರಾಣಿ, ಶಾಸಕ ರಮೇಶ ಭೂಸನೂರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಅನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು, ಮೆರವಣಿಗೆಯುದ್ದಕ್ಕೂ ಸಹಸ್ರಾರು ಜನರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!