ವಿಜಯ ಸಂಕಲ್ಪ ಯಾತ್ರೆ: ಮಡಿಕೇರಿಯಲ್ಲಿ ನಡೆಯಿತು ರೋಡ್ ಶೋ!

ಹೊಸದಿಗಂತ ವರದಿ, ಮಡಿಕೇರಿ:

ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ‘ರೋಡ್ ಶೋ’ ಶನಿವಾರ ಪಕ್ಷದ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯ ಮೂಲಕ ನಡಯುವುದರೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಜನಾಶೀರ್ವಾದವನ್ನು ಕೋರಲಾಯಿತು.
ಪಕ್ಷದ ಮುಖಂಡರಾದ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಅವರನ್ನು ಒಳಗೊಂಡ ವಿಜಯ ಸಂಕಲ್ಪ ರಥದ ಮೆರವಣಿಗೆ, ನಗರದ ಮಾರುಕಟ್ಟೆ ಬಳಿಯ ಚೌಡೇಶ್ವರಿ ದೇವಸ್ಥಾನದಿಂದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದವರೆಗೆ ನಡೆಯಿತು.
ಪೂರ್ಣ ಬಹುಮತ ನೀಡಿ: ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ, ವಿಜಯ ಸಂಕಲ್ಪ ರಥದಿಂದ ಮಾತನಾಡಿದ ಪಕ್ಷದ ಮುಖಂಡ ಕೆ.ಎಸ್. ಈಶ್ವರಪ್ಪ, ಇಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಈ ಬಾರಿ 150 ಸ್ಥಾನಗಳನ್ನು ಪಡೆದು ಪುರ್ಣಬಹುಮತದೊಂದಿಗೆ ಸರ್ಕಾರ ರಚನೆಗೆ ಜನತೆ ಬಿಜೆಪಿಯನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಈಗಾಗಲೇ ರಾಜ್ಯದ ಜನತೆಯ ಬೆಂಬಲ ಪಕ್ಷದ ಮೇಲಿದ್ದು, ಬಿಪಿಯ ಗೆಲುವು ನಿರ್ಧಾರವಾಗಿದೆಯೆಂದು ತಿಳಿಸಿದ ಈಶ್ವರಪ್ಪ, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆ. ಅವರು ಈ ಹಿಂದೆ ಎಲ್ಲೆಲ್ಲಿ ಇಂತಹ ಯಾತ್ರೆ ಮಾಡಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್ ಪರಾಭವಗೊಂಡಿದೆ. ಉತ್ತರ ಪ್ರದೇಶದಲ್ಲಿ ಸೋತ ಕಾಂಗ್ರೆಸ್, ಈಶಾನ್ಯ ರಾಜ್ಯಗಳ ಚುನಾವಣೆಯಲ್ಲೂ ಪರಾಭವಗೊಂಡಿದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷ ಎಲ್ಲಿದೆಯೆಂದು ಗೇಲಿ ಮಾಡಿದರು.
ಸಿಎಂ ಸ್ಥಾನಕ್ಕೆ ಕದನ: ಅಧಿಕಾರವಿಲ್ಲದೆ ಇರುವ ಹಂತದಲ್ಲೂ ಪ್ರಸ್ತುತ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಡಿ.ಕೆ. ಶಿವ ಕುಮಾರ್ ಅವರು, ಒಕ್ಕಲಿಗ ಸಮೂಹಕ್ಕೆ ಮುಖ್ಯ ಮಂತ್ರಿ ಸ್ಥಾನ ನೀಡುವಂತೆ ಕೇಳುತ್ತಲೇ ಬರಲಾಗಿದೆಯೆಂದು ಜಾತಿಯ ಪ್ರಶ್ನೆಯನ್ನು ಮುಂದುಮಾಡಿ ಮಾತನಾಡುತ್ತಿದ್ದರೆ, ಸಿದ್ದರಾಮಯ್ಯ ಅವರು ತಮ್ಮನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವ ಬೇಡಿಕೆಯನ್ನು ಮಂಡಿಸುವ ಮೂಲಕ ಜಾತಿಯ ವಿಷ ಬೀಜವನ್ನು ಬಿತ್ತುತ್ತಿರುವುದಾಗಿ ಕಟುವಾಗಿ ಟೀಕಿಸಿದರು. ಬಿಜೆಪಿ ಪಕ್ಷ ಜಾತಿ ರಾಜಕಾರಣಕ್ಕೆ ಬದಲಾಗಿ ರಾಷ್ಟ್ರೀಯ ಚಿಂತನೆ ಮತ್ತು ಅಭಿವೃದ್ಧಿಯನ್ನಷ್ಟೇ ಮುಖ್ಯವಾಗಿರಿಕೊಂಡು ಜನತೆಯ ಮುಂದೆ ಬರುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಕೊಡಗಿನ ಋಣ ತೀರಿಸುವ ಪ್ರಯತ್ನ: ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಾತನಾಡಿ, ರಾಜ್ಯದ ಬಿಜೆಪಿ ಸರ್ಕಾರ ಕೊಡಗಿನ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಸ್ಪಂದನವನ್ನು ನೀಡುತ್ತಾ, ಅಭಿವೃದ್ಧಿಯ ಮೂಲಕ ಹೊಸ ಕೊಡಗಿನ ನಿರ್ಮಾಣಕ್ಕೆ ಶ್ರಮಿಸುವ ಮೂಲಕ, ವೀರ ಯೋಧರನ್ನು ರಾಷ್ಟ್ರಕ್ಕೆ ನೀಡುತ್ತಾ ಬಂದಿರುವ ಕೊಡಗಿನ ಋಣ ತೀರಿಸುವ ಪ್ರಯತ್ನವನ್ನು ಮಾಡಿದೆಯೆಂದು ಹೇಳಿದರು.
ವಿಶ್ವಾಸದ ರಾಜಕಾರಣ: ವಿರೋಧ ಪಕ್ಷವಾದ ಕಾಂಗ್ರೆಸ್‍ನಂತೆ ಅದನ್ನು ಕೊಡುತ್ತೇವೆ, ಇದನ್ನು ಕೊಡುತ್ತೇವೆ ಎನ್ನುವ ಭರವಸೆಯ ರಾಜಕಾರಣದ ಬದಲಾಗಿ ಬಿಜೆಪಿ ವಿಶ್ವಾಸದ ರಾಜಕಾರಣವನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ವಿರೋಧ ಪಕ್ಷವೇ ಇಲ್ಲದ ರೀತಿಯಲ್ಲಿ ಬಿಜೆಪಿ ಬೆಳೆದಿದೆಯೆಂದು ಸಂತಸ ವ್ಯಕ್ತಪಡಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರು ಅಭಿವೃದ್ಧಿಯ ರಾಜಕಾರಣವನ್ನು ಮಾಡುತ್ತಾ ಬಂದಿದ್ದು, ತಾನು ಮುಖ್ಯಮಂತ್ರಿಯಾಗಿದ್ದಾಗ, ಯಡಿಯೂರಪ್ಪ ಮತ್ತು ಈಗಿನ ಬೊಮ್ಮಾಯಿ ಅವರ ಸರ್ಕಾರದಲ್ಲಿ ಇತರೆ ಯಾವುದೇ ಜಿಲ್ಲೆಗೆ ನೀಡದಷ್ಟು ಹೆಚ್ಚಿನ ವಿಶೇಷ ಅನುದಾನವನ್ನು ಕೊಡಗಿಗೆ ಒದಗಿಸಲಾಗಿದೆ. ಜನತೆ ಅಭಿವೃದ್ಧಿಯ ಚಿಂತನೆಯಡಿ ಬಿಜೆಪಿಯನ್ನು ಮತ್ತೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಎಂಎಲ್‍ಸಿ ಸುಜಾ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವೀರಾಜಪೇಟೆ ಕ್ಷೇತ್ರದ ಉಸ್ತುವಾರಿ ಪ್ರತಾಪ ಸಿಂಹ ನಾಯಕ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ರಾಜ್ಯ ಸಂಚಾಲಕ ಉದಯ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ರಾಜೇಂದ್ರ, ಮಹೇಶ್ ಜೈನಿ ಮೊದಲಾದವರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!