April 29, 2026
Wednesday, April 29, 2026
spot_img

ಖಾತೆ ಬದಲಾವಣೆ ಹೆಸರಲ್ಲಿ ಲಂಚ ವಸೂಲಿ: ಲೋಕಾಯುಕ್ತ ಬಲೆಗೆ ಬಿದ್ದ ವಿಲೇಜ್ ಅಕೌಂಟೆಂಟ್!

ಹೊಸದಿಗಂತ ಹಾವೇರಿ :

ತನ್ನ ಕಾರ್ಯವ್ಯಾಪ್ತಿಯಲ್ಲಿ ಇಲ್ಲದ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಿಗರೊಬ್ಬರು ಗುರುವಾರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ತಾಲೂಕಿನ ನೆಗಳೂರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಕ್ಕೀರೇಶ ಬಾರ್ಕಿ ಲೋಕಾಯುಕ್ತರ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ. ಬಂಧಿತ ಫಕ್ಕೀರೇಶ ಬಾರ್ಕಿ ಈ ಹಿಂದೆ ಹಾವೇರಿ ತಾಲೂಕು ಬಸಾಪುರ ಗ್ರಾಮದ ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ನೆಗಳೂರು ಗ್ರಾಮ ಲೆಕ್ಕಿಗನಾಗಿ ವರ್ಗಾವಣೆಗೊಂಡಿದ್ದ.

ದೂರುದಾರ ಬಸಾಪುರ ಗ್ರಾಮದ ಕರಿಯಲ್ಲಪ್ಪ ಕೆಸರಳ್ಳಿ ಎಂಬುವವರ ಪಿತ್ರಾರ್ಜಿತ ಆಸ್ತಿಯ ಖಾತೆ ಬದಲಾವಣೆಗಾಗಿ ನೆಗಳೂರು ಗ್ರಾಮ ಲೆಕ್ಕಿಗನಾಗಿದ್ದ ಫಕ್ಕೀರೇಶ ಬಾರ್ಕಿ ಅವರಲ್ಲಿ ಕೇಳಿದಾಗ, ತನ್ನ ಕಾರ್ಯ ವ್ಯಾಪ್ತಿಯಲ್ಲಿ ಇಲ್ಲದೇ ಇದ್ದರೂ ಸಹ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ಮತ್ತು ಅದಕ್ಕೆ 63,000 ರೂ.ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 30 ಸಾವಿರ ರೂ.ಗಳನ್ನೂ ಸಹ ಪಡೆದಿದ್ದ. ಅಲ್ಲದೆ ತಾನು ತಾನು ಒಪ್ಪಿಕೊಂಡ ಕೆಲಸವನ್ನು ಪೂರ್ಣಗೊಳಿಸದೆ ಮತ್ತೆ 30 ಸಾವಿರ ರೂ.ನೀಡುವಂತೆ ಒತ್ತಾಯಿಸಿ, ತುರ್ತಾಗಿ ೮೫೦೦ ರೂ. ನೀಡುವಂತೆ ಒತ್ತಡ ಹೇರಿದ್ದ.

ಈ ಕುರಿತು ಬಸಾಪುರ ಗ್ರಾಮದ ಕರಿಯಲ್ಲಪ್ಪ ಕೆಸರಳ್ಳಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ನೆಗಳೂರ ಗ್ರಾಮದಲ್ಲಿರುವ ಗ್ರಾಮ ಆಡಳಿತಾಕಾರಿಗಳ ಕಚೇರಿಯಲ್ಲಿ ದೂರುದಾರರಿಂದ 1500ರೂ.ಲಂಚದ ಹಣವನ್ನು ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿತ ಫಕ್ಕೀರೇಶ ಬಾರ್ಕಿ ನೆಗಳೂರ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು, ವಾಸ್ತವದಲ್ಲಿ ಅವರಿಗೆ ಬಸಾಪುರ ಗ್ರಾಪಂ ವ್ಯಾಪ್ತಿಯ ಕಾರ್ಯಗಳು ಸಂಬಂಧವೇ ಇಲ್ಲ. ಆದರೂ ಅವರು ತಮ್ಮ ವ್ಯಾಪ್ತಿಗೆ ಬಾರದ ಬಸಾಪುರ ಗ್ರಾಮದ ಆಸ್ತಿ ಬದಲಾವಣೆ ಮಾಡಿಸಿಕೊಡುವುದಾಗಿ ಒಪ್ಪಿಕೊಂಡು ಹಣ ಪಡೆದಿದ್ದಾರೆ ಎಂಬ ದೂರಿನ ಮೇರೆಗೆ ಲೋಕಾಯುಕ್ತರು ದಾಳಿ ನಡೆಸಿದ್ದು ಸದ್ಯ ಆರೋಪಿತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.

ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ, ಹಾವೇರಿ ಡಿವೈಎಸ್‌ಪಿ ಸಿ.ಮಧುಸೂದನ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ತನಿಖಾಕಾರಿ ಶ್ರೀದೇವಿ ಪಾಟೀಲ ನೇತೃತ್ವದಲ್ಲಿ ಲೋಕಾಯುಕ್ತ ನಿರೀಕ್ಷಕರಾದ ವಿಶ್ವನಾಥ ಕಬ್ಬೂರಿ, ದಾದಾವಲಿ ಕೆ.ಹೆಚ್. ಸೇರಿದಂತೆ ಹಾವೇರಿ ಲೋಕಾಯುಕ್ತ ಘಟಕದ ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !