ದೌರ್ಜನ್ಯ, ದಬ್ಬಾಳಿಕೆಗೆ ಅವಕಾಶವಿಲ್ಲ, ಬಾಲ‌ ಬಿಚ್ಚಿದರೆ ಕಠಿಣ ಕ್ರಮ: ಸಚಿವ ಬಿ.ನಾಗೇಂದ್ರ ಎಚ್ಚರಿಕೆ

ಹೊಸದಿಗಂತ ವರದಿ ಬಳ್ಳಾರಿ:

ರಾಜ್ಯದ ಜನರು ಜನಪರ, ಉತ್ತಮ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ, ಅವರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ಅಭಿವೃದ್ಧಿಯೇ ನಮ್ಮ ಮೊದಲ ಗುರಿ, ಬಡಜನರ ಸೇವೆಯೇ ನಮ್ಮ ಆದ್ಯತೆ, ನಮ್ಮ ಅವಧಿಯಲ್ಲಿ ದೌರ್ಜನ್ಯ, ದಬ್ಬಾಳಿಕೆ, ರೌಡಿಸಂಗೆ ಅವಕಾಶವಿಲ್ಲ, ಒಂದು ವೇಳೆ ಬಾಲ ಬಿಚ್ಚಿದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯುವಜನ ಸೇವಾ, ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

ನಗರದ ಮಹಾನಗರ ಪಾಲಿಕೆ ಕಚೇರಿಯ ಶಾಸಕರ ಕೊಠಡಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಳ್ಳಾರಿಯ ಜನರು ಉತ್ತಮ ಆಡಳಿತ ನಡೆಸಲು ಆಶಿರ್ವದಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು ಎನ್ನುವ ಆಶಯ ನಮ್ಮದು. ಜಿಲ್ಲೆಯಲ್ಲಿ ದೌರ್ಜನ್ಯ, ರೌಡಿಸಂ, ದಬ್ಬಾಳಿಕೆಗೆ ಅವಕಾಶವೇ ಇಲ್ಲ, ಯಾರೂ ಕೂಡ ಬಾಲ ಬಿಚ್ಚಂಗಿಲ್ಲ. ಇದಕ್ಕಾಗಿಯೇ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವೆ ಎಂದರು.

ಜಿಲ್ಲೆ ಅಭಿವೃದ್ಧಿ ಜೊತೆಗೆ ಶಾಂತವಾಗಿರಬೇಕು, ಪ್ರತಿಯೊಬ್ಬರೂ ನೆಮ್ಮದಿಯಿಂದ, ಸಹಬಾಳ್ವೆಯಿಂದ ಜೀವನ ನಡೆಸಬೇಕು. ಬಾಲ ಬಿಚ್ಚಿದರೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವೆ. ತಿದ್ದಿಕೊಳ್ಳಲು ಒಮ್ಮೆ ಅವಕಾಶ ನೀಡಲಾಗುವುದು ಆದರೆ ಮತ್ತೆ ಜನರಿಗೆ ತೊಂದರೆ ನೀಡಲು ಮುಂದುವರೆಸಿದರೆ ಮುಲಾಜಿಲ್ಲದೇ ಒದ್ದು ಜೈಲಿಗೆ ಕಳಿಸಲಾಗುವುದು. ಸಾವರ್ಜನಿಕರಿಂದ ಒಂದು ಸಣ್ಣ ದೂರುಗಳು ಬಂದರೂ ಸುಮ್ಮನಿರೊಲ್ಲ, ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ತೀರಾ ಗಂಭೀರ ಪ್ರಕರಣಗಳು ಕಂಡು ಬಂದರೆ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.

ಅಖಂಡ ಜಿಲ್ಲೆಯಲ್ಲಿ10 ಕ್ಷೇತ್ರಗಳಿದ್ದವು, ಇಬ್ಭಾಗದ ಬಳಿಕ 5 ಕ್ಷೇತ್ರಗಳು ಉಳಿದಿವೆ. ನಮ್ಮ ಪಕ್ಷದ ಹಿರಿಯರ, ಕಿರಿಯರ ಸಲಹೆ, ಮಾರ್ಗದರ್ಶನ ಪಡೆದು ಬಳ್ಳಾರಿ ಜಿಲ್ಲೆಯನ್ನು ನಾನಾ ರೀತಿಯಲ್ಲಿ ಅಭಿವೃದ್ಧಿ ಪಡಿಸಿ, ರಾಜ್ಯದಲ್ಲೇ ಮಾದರಿ ಜಿಲ್ಲೆಯನ್ನಾಗಿ‌ ಮಾಡುವೆ ಇದು ಭರವಸೆಯಲ್ಲ, ನುಡಿದಂತೆ ನಡೆಯುವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!