September 30, 2026
Wednesday, September 30, 2026
spot_img

ವೈರಲ್ ವಿಡಿಯೋಗೆ ಸಿಕ್ಕಿತು ಫಲ: ಕಂಪ್ಲೀಟ್ ಚೇಂಜ್ ಆಯ್ತು IRCTC ಮುಖಪುಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಬಿಗ್ ಗಿಫ್ಟ್ ನೀಡಿದೆ. ಆನ್‌ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ ಬಹುನಿರೀಕ್ಷಿತ ಐಆರ್‌ಸಿಟಿಸಿ (IRCTC) ಹೊಸ ಬೀಟಾ (ಪ್ರಾಯೋಗಿಕ) ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಲಾಗಿದೆ.

ಜುಲೈ 16ರ ರಾತ್ರಿ 9 ಗಂಟೆಯಿಂದ ಸಾರ್ವಜನಿಕರು ಈ ಪ್ರಾಯೋಗಿಕ ಆವೃತ್ತಿಯನ್ನು ಬಳಸಬಹುದಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಅಧಿಕೃತ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿಯೇ ಇದರ ಲಿಂಕ್ ನೀಡಲಾಗಿದ್ದು, ಗ್ರಾಹಕರು ಸುಲಭವಾಗಿ ಹೊಸ ವೇದಿಕೆಗೆ ಭೇಟಿ ನೀಡಬಹುದು.

ತಾಂತ್ರಿಕ ಸುಧಾರಣೆ ಮತ್ತು ಮುಂದಿನ ನಡೆ

ವೆಬ್‌ಸೈಟ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ತಾಂತ್ರಿಕ ದೋಷಗಳನ್ನು (Bugs) ಪತ್ತೆಹಚ್ಚಲು ಈ ಪ್ರಾಯೋಗಿಕ ಆವೃತ್ತಿಯನ್ನು ತರಲಾಗಿದೆ. ಸಾರ್ವಜನಿಕರ ಫೀಡ್‌ಬ್ಯಾಕ್ ಆಧರಿಸಿ, ಮುಂದಿನ ಕೆಲವೇ ವಾರಗಳಲ್ಲಿ ಸಂಪೂರ್ಣ ನವೀಕೃತ ವೆಬ್‌ಸೈಟ್ ಅಧಿಕೃತವಾಗಿ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಯ ದೂರಿಗೆ ತಕ್ಷಣ ಸ್ಪಂದಿಸಿದ ರೈಲ್ವೆ ಸಚಿವರು

ಹಳೆಯ ವೆಬ್‌ಸೈಟ್‌ನ ಮಂದಗತಿ, ಕಷ್ಟಕರ ನ್ಯಾವಿಗೇಷನ್ ಹಾಗೂ ಕಿರಿಕಿರಿ ಉಂಟುಮಾಡುವ ‘ಕ್ಯಾಪ್ಚಾ’ ನಿಯಮಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನವಿತ್ತು.

ಇತ್ತೀಚೆಗೆ ಜೈಪುರದ ‘ಎಮ್‌ಎನ್‌ಐಟಿ’ (MNIT) ಕಾಲೇಜಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿದ್ದಾಗ, ವಿದ್ಯಾರ್ಥಿಯೊಬ್ಬರು ಈ ಸಮಸ್ಯೆಯನ್ನು ನೇರವಾಗಿ ಸಚಿವರ ಗಮನಕ್ಕೆ ತಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ತಕ್ಷಣವೇ ಎಚ್ಚೆತ್ತ ಸಚಿವರು, ಇಲಾಖೆಯ ತಾಂತ್ರಿಕ ವಿಭಾಗಕ್ಕೆ ವೆಬ್‌ಸೈಟ್ ನವೀಕರಿಸಲು ಆದೇಶಿಸಿದ್ದರು. ವಿಶೇಷವೆಂದರೆ, ಈ ಹೊಸ ಬದಲಾವಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಅಮೂಲ್ಯ ಸಲಹೆಗಳನ್ನೂ ಪರಿಗಣಿಸಲಾಗಿದೆ.

Must Read