July 25, 2026
Saturday, July 25, 2026
spot_img

ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ವಿಶ್ವದಾಖಲೆ: ಇಂಗ್ಲೆಂಡ್ ದೈತ್ಯನ ದಾಖಲೆ ಸರಿಗಟ್ಟಿದ ರನ್‌ ಮಷೀನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾಖಲೆಗಳ ಸರದಾರ, ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಅದ್ಭುತ ಕ್ರಿಕೆಟ್ ಜರ್ನಿಗೆ ಮತ್ತೊಂದು ಐತಿಹಾಸಿಕ ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ 50 ಪ್ಲಸ್ (50+) ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡ ಇಂಗ್ಲೆಂಡ್ ಬ್ಯಾಟರ್ ಅಲೆಕ್ಸ್ ಹೇಲ್ಸ್ ಅವರ ಸಾರ್ವಕಾಲಿಕ ದಾಖಲೆಯನ್ನು ಕಿಂಗ್ ಕೊಹ್ಲಿ ಈಗ ಸರಿಗಟ್ಟಿದ್ದಾರೆ.

ದೇವದತ್ ಪಡಿಕ್ಕಲ್ ಜೊತೆ ದಾಖಲೆಯ ಜೊತೆಯಾಟ:

ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವಿಕೆಟ್‌ಗೆ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಜೊತೆಗೂಡಿ ಕೇವಲ 41 ಎಸೆತಗಳಲ್ಲಿ 76 ರನ್‌ಗಳ ಅತ್ಯಮೂಲ್ಯ ಜೊತೆಯಾಟವಾಡಿದರು. ಈ ಆಟದ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟದ ಭಾಗವಾದ ಏಷ್ಯಾದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಅಲೆಕ್ಸ್ ಹೇಲ್ಸ್ ದಾಖಲೆ ಸರಿಗಟ್ಟಿದ ಕೊಹ್ಲಿ:

ಇಲ್ಲಿಯವರೆಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 50+ ರನ್‌ಗಳ ಜೊತೆಯಾಟದ ಪಾಲುದಾರರಾದ ವಿಶ್ವ ದಾಖಲೆ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಹೆಸರಿನಲ್ಲಿತ್ತು. ಹೇಲ್ಸ್ ಒಟ್ಟು 523 ಟಿ20 ಇನ್ನಿಂಗ್ಸ್‌ಗಳಿಂದ 210 ಬಾರಿ ಈ ಸಾಧನೆ ಮಾಡಿದ್ದರು. ಆದರೆ ಕಿಂಗ್ ಕೊಹ್ಲಿ ಕೇವಲ 410 ಟಿ20 ಇನ್ನಿಂಗ್ಸ್‌ಗಳಲ್ಲೇ 210ನೇ ಬಾರಿ 50+ ರನ್‌ಗಳ ಜೊತೆಯಾಟದ ಪಾಲುದಾರರಾಗುವ ಮೂಲಕ ಹೇಲ್ಸ್ ಅವರ ವಿಶ್ವ ದಾಖಲೆಯನ್ನು ಸಮೀಕರಿಸಿದ್ದಾರೆ.

ಐಪಿಎಲ್‌ನಲ್ಲಿ ಅಬ್ಬರಿಸಿದ ರನ್ ಮಷೀನ್:

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 58 ರನ್ ಸಿಡಿಸಿ ಮಿಂಚಿದರು. ಈ ಅರ್ಧಶತಕದೊಂದಿಗೆ ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ 500 ರನ್‌ಗಳ ಗಡಿಯನ್ನು ದಾಟಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆ:

ಈ ಭರ್ಜರಿ ಪ್ರದರ್ಶನದೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದು ಅಪರೂಪದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್‌ನ 9 ವಿಭಿನ್ನ ಸೀಸನ್‌ಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕೊಹ್ಲಿ ಭಾಜನರಾಗಿದ್ದಾರೆ. ಕೊಹ್ಲಿ ಅವರ ಈ ಅದ್ಭುತ ಫಾರ್ಮ್ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !