ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ ದೃಷ್ಟಿವಿಕಲ ಚೇತನರು: ಬಾಳಿಗೆ ಬೆಳಕಾದ ಉದ್ಯೋಗ ಖಾತ್ರಿ ಯೋಜನೆ

– ಎಂ.ಜೆ.ತಿಪ್ಪೇಸ್ವಾಮಿ, ಚಿತ್ರದುರ್ಗ

ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಇದರಿಂದ ಗ್ರಾಮೀಣ ಭಾಗದ ಅನೇಕ ಜನರಿಗೆ ಕೆಲಸ ದೊರೆಯುತ್ತಿದೆ. ಇದರಲ್ಲಿ ಸಾಮಾನ್ಯ ಜನರು ಮಾತ್ರವಲ್ಲದೆ ಕಣ್ಣಿಲ್ಲದ ಹುಟ್ಟು ದೃಷ್ಟಿವಿಕಲಚೇತನರೂ ಸಹ ಕೆಲಸ ಮಾಡಿ ಜೀವನ ನಿರ್ವಹಣೆ ಮಾರ್ಗ ಕಂಡಿಕೊಂಡಿರುವುದು ಗಮನಾರ್ಹ ಸಂಗತಿ.
ಈ ಮೂರು ಜನ ಅಂಧರು ಒಂದೇ ಕುಟುಂಬದವರಾಗಿದ್ದು, ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾ.ಪಂ.ಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಪ್ರಸಕ್ತ ಸಾಲಿನಲ್ಲಿ ಅನುಷ್ಟಾನ ಮಾಡುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಈ ಮೂವರು ಅಂಧರಿಗೆ ಸರ್ಕಾರದ ನಿಯಮಾವಳಿ ಪ್ರಕಾರ ಪ್ರತ್ಯೇಕ ಜಾಬ್‌ಕಾರ್ಡ್ ನೀಡಲಾಗಿದೆ. ಕೆಲಸದಲ್ಲಿ ಶೇಕಡಾ ೫೦ ರಷ್ಟು ವಿನಾಯಿತಿಯನ್ನೂ ನೀಡಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಸುಮಾರು ೨೭೪೪ ವಿಕಲಚೇತನರಿಗೆ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಿಸಲಾಗಿದೆ. ಆದರೆ ಒಂದೇ ಕುಟುಂಬದ ಮೂವರು ಕುರುಡರು ಕೆಲಸ ಮಾಡುತ್ತಿರುವುದು ವಿಶೇಷ. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದ ಜಿ.ಶೇಖರಪ್ಪ ಮತ್ತು ಹೆಚ್.ರಾಮಕ್ಕ ದಂಪತಿಗೆ ನಾಲ್ವರು ಮಕ್ಕಳು. ಮೊದಲ ಪುತ್ರಿ ಅಂಬಿಕಾ ಚೆನ್ನಾಗಿದ್ದು, ವಿವಾಹವಾಗಿದೆ. ಕಲಾವತಿ, ಅಜಯ್‌ಕುಮಾರ್ ಹಾಗೂ ಆಶಾ. ಈ ಮೂವರು ಹುಟ್ಟು ಕುರುಡರು. ಕಲಾವತಿ ಮತ್ತು ಅಜಯ್‌ಕುಮಾರ್ ದ್ವಿತೀಯ ಪಿಯುಸಿ, ಆಶಾ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ.

ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ ಅವರ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಕಳೆದ ೨-೩ ತಿಂಗಳ ಹಿಂದೆ ವಿಕಲಚೇತನರ ಮನೆಗಳಿಗೇ ಹೋಗಿ ಜಾಬ್‌ಕಾರ್ಡ್ ವಿತರಿಸುವ ಅಭಿಯಾನದಡಿ, ಮುದ್ದಾಪುರ ಗ್ರಾ.ಪಂ.ಯವರು ಇವರ ಮನೆಗೇ ತೆರಳಿ ಜಾಬ್‌ಕಾರ್ಡ್ ವಿತರಿಸಿದ್ದಾರೆ. ಈ ಮೂರು ಜನರಿಗೂ ತಲಾ ನೂರು ಮಾನವ ದಿನಗಳ ಕೆಲಸ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಹಾಗೂ ಕೆಲಸಗಾರರ ಜೊತೆ ಈ ಮೂರು ಜನ ಅಂಧರೂ ಸಹ ಕೆಲಸ ಮಾಡುತ್ತಿದ್ದಾರೆ.

ಎರಡೂ ಕಣ್ಣು ಕಾಣದ ಕಲಾವತಿ ಮತ್ತು ಅಜಯ್‌ಕುಮಾರ್ ಮಣ್ಣು ತುಂಬಿಕೊಡುವ ಕೆಲಸ ಮಾಡಿದರೆ, ಅತ್ಯಲ್ಪ ಪ್ರಮಾಣದಲ್ಲಿ ಕಣ್ಣು ಕಾಣಿಸುವ ಆಶಾ, ನರೇಗಾ ಕೆಲಸಗಾರರಿಗೆ ಕುಡಿಯುವ ನೀರು ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಈ ಮೂರು ಜನರಿಗೂ ದಿನಕ್ಕೆ ೩೦೯ ರೂ.ಗಳಂತೆ ಕೂಲಿ ಹಣ ನೀಡಲಾಗುತ್ತಿದೆ. ಇವರ ತಂದೆ, ಮಾವ ಅಥವಾ ಗ್ರಾಮದ ಇತರರು ಮನೆಯಿಂದ ಯಾವುದಾದರೂ ವಾಹನದಲ್ಲಿ ಕರೆದುಕೊಂಡು ಹೋಗಿ ಕೆಲಸಕ್ಕೆ ಬಿಡುತ್ತಾರೆ. ಕೆಲಸದ ನಂತರ ಮನೆಗೆ ಕರೆತರುತ್ತಿದ್ದಾರೆ. ಕೆಲಸದ ವೇಳೆ ನರೇಗಾ ಕೆಲಸಗಾರರು ಇವರಿಗೆ ಸಹಕಾರಿಯಾಗಿದ್ದಾರೆ.

ಮುದ್ದಾಪುರ ಗ್ರಾ.ಪಂ.ಯವರು ನಮ್ಮ ಮನೆಗೇ ಬಂದು ನರೇಗಾ ಯೋಜನೆಯ ಜಾಬ್ ಕಾರ್ಡ್ ನೀಡಿದ್ದಾರೆ. ಕೆಲಸ ಮಾಡಲು ಪ್ರೋತ್ಸಾಹಿಸಿದ್ದಾರೆ. ನಾವು ಮೂವರು ಕೆಲಸ ಮಾಡುತ್ತಿದ್ದೇವೆ. ಕೆಲಸದಲ್ಲಿ ಶೇಕಡ ೫೦ ರಷ್ಟು ವಿನಾಯಿತಿ ನೀಡಲಾಗಿದೆ. ಬೆಳಿಗ್ಗೆ ೭ ರಿಂದ ೧೧ ಗಂಟೆವರೆಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಜತೆ ಕೆಲಸ ಮಾಡುವ ಎಲ್ಲರೂ ನಮಗೆ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಎಲ್ಲರಂತೆ ನಾವೂ ಸಹ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ ಎನ್ನುತ್ತಾರೆ ಈ ಮೂವರು ಅಂಧರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!