September 26, 2026
Saturday, September 26, 2026
spot_img

ವೋಟರ್ ಐಡಿ ಪರಿಶೀಲನೆ ನಿಯಮ ಸಡಿಲ: ಸಾರ್ವಜನಿಕರ ಅಲೆದಾಟಕ್ಕೆ ತೆರೆ ಎಳೆದ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಪ್ರತಿಯೊಬ್ಬ ಅರ್ಹ ಪ್ರಜೆಗೂ ಮತದಾನದ ಹಕ್ಕು ತಲುಪಬೇಕು ಮತ್ತು ಆ ಪ್ರಕ್ರಿಯೆ ಸರಳವಾಗಿರಬೇಕು ಎಂಬ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ ಅತ್ಯಂತ ಪ್ರಮುಖ ಹಾಗೂ ಜನಸ್ನೇಹಿ ನಿರ್ಧಾರಗಳನ್ನು ಕೈಗೊಂಡಿದೆ. ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಘೋಷಿಸಲಾಗಿದ್ದು, ಸಾರ್ವಜನಿಕರು ಅನುಭವಿಸುತ್ತಿದ್ದ ಅಲೆದಾಟ ಮತ್ತು ತೊಂದರೆಗಳಿಗೆ ಸಂಪೂರ್ಣ ತೆರೆ ಬಿದ್ದಿದೆ.

ಇಲ್ಲಿಯವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಅಥವಾ ಇತರ ತಾಂತ್ರಿಕ ವ್ಯತ್ಯಾಸಗಳು ಕಂಡುಬಂದಲ್ಲಿ, ಸಾರ್ವಜನಿಕರು ಸ್ವತಃ ನಿರ್ದಿಷ್ಟ ಆಫೀಸ್‌ಗಳಿಗೆ ಅಲೆದು, ಸರದಿ ಸಾಲಿನಲ್ಲಿ ನಿಂತು ಅಧಿಕಾರಿಗಳ ಮುಂದೆ ಹಾಜರಾಗಬೇಕಿತ್ತು. ಆದರೆ, ಆಯೋಗದ ನೂತನ ಆದೇಶದ ಪ್ರಕಾರ ಇನ್ಮುಂದೆ ಸಾರ್ವಜನಿಕರು ಯಾವುದೇ ವಿಚಾರಣೆಗೆ ಖುದ್ದಾಗಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.

ಬದಲಾಗಿ, ಬೂತ್ ಮಟ್ಟದ ಅಧಿಕಾರಿಗಳೇ ನೇರವಾಗಿ ನಿಮ್ಮ ಮನೆಬಾಗಿಲಿಗೆ ಆಗಮಿಸಲಿದ್ದಾರೆ. ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಅವುಗಳನ್ನು ‘ECINet’ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಿದ್ದಾರೆ. ಈ ಮೂಲಕ ಸಾಮಾನ್ಯ ಜನರು ಅನುಭವಿಸುತ್ತಿದ್ದ ಸಮಯದ ವ್ಯರ್ಥ ಮತ್ತು ಗೊಂದಲಗಳಿಗೆ ಮುಕ್ತಿ ಸಿಕ್ಕಂತಾಗಿದೆ.

ಅತ್ಯಂತ ಅಪರೂಪದ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಅದನ್ನೂ ಸಹ ಸಾರ್ವಜನಿಕರಿಗೆ ಸುಲಭವಾಗುವಂತೆ ಆನ್‌ಲೈನ್ ಮೂಲಕವೇ ನಡೆಸಲು ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಒಂದು ವೇಳೆ ಮತದಾರರಿಗೆ ವಿಚಾರಣೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಅವರ ಪರವಾಗಿ ಅವರ ಮನೆಯ ಯಾವುದೇ ಹಿರಿಯ ವ್ಯಕ್ತಿಯನ್ನು ಅಧಿಕೃತವಾಗಿ ಕಳುಹಿಸಿಕೊಡಲು ಅವಕಾಶ ನೀಡಲಾಗಿದೆ.

ಇತ್ತೀಚೆಗೆ ಆಯೋಗದ ಒಳಗಿನ ತಾಂತ್ರಿಕ ಮತ್ತು ನಿಯಂತ್ರಣ ವ್ಯವಸ್ಥೆಯ ಕುರಿತು ಮೂಡಿದ ಗೊಂದಲಗಳ ಹಿನ್ನೆಲೆಯಲ್ಲಿ, ಚುನಾವಣಾ ಸಮಿತಿಯು ತನ್ನ ‘ECINet’ ಪೋರ್ಟಲ್‌ನ ಕಾರ್ಯವೈಖರಿಯನ್ನು ಸಂಪೂರ್ಣ ರಿವ್ಯೂ ಮಾಡಲು ನಿರ್ಧರಿಸಿದೆ. ದೆಹಲಿಯಲ್ಲಿ ಮೂವರು ಕಮಿಷನರ್‌ಗಳ ಉಪಸ್ಥಿತಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ‘ಫಾರ್ಮ್ 6’ ಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಸಂಪೂರ್ಣವಾಗಿ ಎತ್ತಿಹಿಡಿಯಲಾಗಿದ್ದು, ನಿಯಮಾನುಸಾರವೇ ಪ್ರಕ್ರಿಯೆಗಳು ಮುಂದುವರಿಯಲಿವೆ ಎಂದು ಆಯೋಗ ಸ್ಪಷ್ಟಪಡಿಸಿದೆ.

Must Read