ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ಇನ್ನಷ್ಟೇ ಆರಂಭವಾಗಿದ್ದರೂ, ಕೃಷ್ಣ ರಾಜ ಸಾಗರ ಡ್ಯಾಮ್ ನಲ್ಲಿ ನೀರಿನ ಮಟ್ಟ ಗಮನಾರ್ಹವಾಗಿ ಇಳಿಕೆಯಾಗಿರುವುದು ಆತಂಕ ಹುಟ್ಟಿಸಿದೆ. ಪ್ರಸ್ತುತ ಜಲಾಶಯದ ಮಟ್ಟ 99 ಅಡಿಗೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಮಳೆ ತಡವಾದರೆ ನೀರಿನ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಈ ಜಲಾಶಯವು ಈ ವರ್ಷ ಆರಂಭದಲ್ಲೇ ಭರ್ತಿಯಾಗಿ ದಾಖಲೆ ಬರೆದಿತ್ತು. ಆದರೆ ಈಗ ಗರಿಷ್ಠ 124.80 ಅಡಿ ಸಾಮರ್ಥ್ಯದ ವಿರುದ್ಧ ನೀರಿನ ಮಟ್ಟ ಕುಸಿತ ಕಂಡಿದೆ. ಜಲಾಶಯಕ್ಕೆ ಒಳಹರಿವು ಕೇವಲ 66 ಕ್ಯೂಸೆಕ್ ಇದ್ದರೆ, ಹೊರಹರಿವು 4,033 ಕ್ಯೂಸೆಕ್ ಆಗಿದೆ.
ನೀರಿನ ಮಟ್ಟ ಇಳಿಕೆಯ ನಡುವೆಯೂ, ಈಗಾಗಲೇ ಬೆಳೆದಿರುವ ಬೆಳೆಗಳಿಗೆ ಕಟ್ಟುಪದ್ದತಿಯಂತೆ ನೀರು ಬಿಡಲಾಗುತ್ತಿದೆ. ತಜ್ಞರ ಪ್ರಕಾರ, ಡ್ಯಾಂನಲ್ಲಿ 60 ಅಡಿವರೆಗೂ ನೀರನ್ನು ಬಳಸಲು ಸಾಧ್ಯವಾಗುವುದರಿಂದ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ. ಇದರಿಂದ ಮಂಡ್ಯ, ಮೈಸೂರು, ರಾಮನಗರ ಮತ್ತು ಬೆಂಗಳೂರು ಭಾಗಗಳಿಗೆ ತಾತ್ಕಾಲಿಕವಾಗಿ ನಿರಾಳತೆ ಸಿಕ್ಕಿದೆ.
ಇದನ್ನೂ ಓದಿ:
ಆದರೆ, ಎಲ್ ನಿನೋ ಪರಿಣಾಮದಿಂದ ಈ ಬಾರಿ ಮುಂಗಾರು ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಹವಾಮಾನ ತಜ್ಞರ ಎಚ್ಚರಿಕೆ ಆತಂಕ ಹೆಚ್ಚಿಸಿದೆ. ಮಳೆ ಕೊರತೆ ಮುಂದುವರಿದರೆ ಕೃಷಿ ಹಾಗೂ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇತಿಹಾಸದತ್ತ ನೋಡುವುದಾದರೆ, 2003ರಲ್ಲಿ ಏಪ್ರಿಲ್ ತಿಂಗಳಲ್ಲಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 65.90 ಅಡಿಗೆ ಇಳಿದು ಕನಿಷ್ಠ ಮಟ್ಟ ದಾಖಲಾಗಿತ್ತು. ಕಳೆದ ದಶಕದ ಅಂಕಿಅಂಶಗಳ ಪ್ರಕಾರ, ಈ ಬಾರಿ 99 ಅಡಿ ಮಟ್ಟ ಮಧ್ಯಮ ಮಟ್ಟದಲ್ಲಿದ್ದರೂ, ಮುಂದಿನ ಮಳೆಯ ಮೇಲೆಯೇ ಭವಿಷ್ಯ ಅವಲಂಬಿತವಾಗಿದೆ.
ಒಟ್ಟಾರೆ, ಜಲಾಶಯದ ನೀರಿನ ಮಟ್ಟ ಕುಸಿತ ಹಾಗೂ ಮುಂಗಾರು ಬಗ್ಗೆ ಅನಿಶ್ಚಿತತೆ ರಾಜ್ಯದ ನೀರಿನ ನಿರ್ವಹಣೆಗೆ ದೊಡ್ಡ ಸವಾಲಾಗಿ ಪರಿಣಮಿಸುವ ಲಕ್ಷಣಗಳು ಕಾಣಿಸುತ್ತಿವೆ.



