ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ-ಆಫ್ಸ್ ಪ್ರವೇಶಿಸಿದ ಬೆನ್ನಲ್ಲೇ, ನಾಯಕ ರಿಯಾನ್ ಪರಾಗ್ ಮತ್ತು ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ನಡುವಿನ ಭಿನ್ನಾಭಿಪ್ರಾಯ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಂಡದ ಯಶಸ್ಸಿನ ಕುರಿತು ಪರಾಗ್ ನೀಡಿದ್ದ ಪಂದ್ಯದ ನಂತರದ ಹೇಳಿಕೆಯನ್ನು ಕೋಚ್ ಸಂಗಕ್ಕಾರ ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ರಿಯಾನ್ ಪರಾಗ್ ನೀಡಿದ ವಿವಾದಾತ್ಮಕ ಹೇಳಿಕೆ ಏನು?
ಲೀಗ್ ಹಂತ ಮುಕ್ತಾಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಆರ್ಆರ್ ನಾಯಕ ರಿಯಾನ್ ಪರಾಗ್, “ನಮ್ಮ ತಂಡದಲ್ಲಿ ಯುವ ಆಟಗಾರರು ಹೆಚ್ಚಿದ್ದಾರೆ ಮತ್ತು ಅನುಭವದ ಕೊರತೆಯಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಈ ಬಾರಿ ಟಾಪ್-4 ತಲುಪುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ” ಎಂದಿದ್ದರು. ನಾಯಕನ ಈ ಮಾತುಗಳು ಕ್ರಿಕೆಟ್ ಪಂಡಿತರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತ್ತು.
ಪರಾಗ್ ಹೇಳಿಕೆಗೆ ಕುಮಾರ್ ಸಂಗಕ್ಕಾರ ಕೊಟ್ಟ ಖಡಕ್ ಉತ್ತರ:
ನಾಯಕನ ಈ ‘ಅನಿರೀಕ್ಷಿತ ಕ್ವಾಲಿಫಿಕೇಶನ್’ ಹೇಳಿಕೆಯನ್ನು ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ತೀವ್ರವಾಗಿ ವಿರೋಧಿಸಿದ್ದಾರೆ. “ನಾನು ಪರಾಗ್ ಹೇಳಿಕೆಯನ್ನು ಒಪ್ಪುವುದಿಲ್ಲ. ನಾವು ಅದೃಷ್ಟದ ಆಟ ಆಡಲು ಇಲ್ಲಿಗೆ ಬಂದಿಲ್ಲ. 2022 ರಲ್ಲೇ ಮ್ಯಾನೇಜ್‌ಮೆಂಟ್ ಹರಾಜಿನಲ್ಲಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿದೆ. ಪ್ಲೇ-ಆಫ್ಸ್ ತಲುಪುವುದು ನಮ್ಮ ಮೊದಲೇ ನಿರ್ಧರಿತ ಗುರಿಯಾಗಿತ್ತು, ಇದರಲ್ಲಿ ಯಾವುದೇ ಅಚ್ಚರಿಯಿಲ್ಲ” ಎಂದು ನೇರವಾಗಿ ಹೇಳಿದ್ದಾರೆ.
ಯುವ ನಾಯಕನ ಬೆಂಬಲಕ್ಕೆ ನಿಂತ ಕೋಚ್:
ಹೇಳಿಕೆಯಲ್ಲಿ ಭಿನ್ನಾಭಿಪ್ರಾಯವಿದ್ದರೂ, ರಿಯಾನ್ ಪರಾಗ್ ಅವರ ನಾಯಕತ್ವ ಮತ್ತು ಮಾನಸಿಕ ಸಾಮರ್ಥ್ಯವನ್ನು ಸಂಗಕ್ಕಾರ ಶ್ಲಾಘಿಸಿದ್ದಾರೆ. ಕಳೆದ 7 ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರಾಗ್ ಎದುರಿಸಿದ ಟೀಕೆಗಳನ್ನು ಮತ್ಯಾವ ಆಟಗಾರನೂ ಎದುರಿಸಿಲ್ಲ ಎಂದ ಕೋಚ್, ಒಬ್ಬ ಸ್ಮಾರ್ಟ್ ನಾಯಕನಾಗಿ ತಂಡವನ್ನು ಮುನ್ನಡೆಸಿದ ಪರಾಗ್ ಬೆಳವಣಿಗೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.



