ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಅಕ್ರಮಗಳ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಪತ್ರ ಬರೆದು 15 ದಿನಗಳಲ್ಲಿ ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಯಾವುದೇ ರೀತಿಯ ತನಿಖೆ ನಡೆಸಲಿ, ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರಕ್ಕೆ ಹೆದರಲ್ಲ. ಯಾವುದೇ ಆರೋಪ ಇರಲಿ, ದೂರು ಇರಲಿ, ಯಾವುದೇ ತನಿಖೆ ಮಾಡಬಹುದು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಅಂತ ಸಿಐಡಿ ತನಿಖೆಗೆ ನಾನೇ ಹಿಂದೆ ದೂರು ನೀಡಿದ್ದೆನೆ.
ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆಯಲ್ಲಿ ಎಫ್ಐಆರ್ ಆಗಿರಲಿಲ್ಲ. ಹೊಸ ಸರ್ಕಾರ ಬಂದಿದೆ, ಯಾವುದೇ ರೀತಿ ತನಿಖೆ ನಡೆಸಲಿ, ಎದುರಿಸಲು ನಾವು ಸಿದ್ಧ. ತನಿಖೆ ಪಾರದರ್ಶಕವಾಗಿರಲಿ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು, ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು ಎಂದು ತಿಳಿಸಿದರು.
ಪಠ್ಯ ಪುಸ್ತಕ ಬದಲಾವಣೆ ಬೇಡ
ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ವಿಚಾರಗಳ ಆಧಾರ ಮೇಲೆ ಕೆಲವು ಹೊಸದಾಗಿ ಪಠ್ಯ ಪುಸ್ತಕದಲ್ಲಿ ಅಳವಡಿಕೆ ಮಾಡಿದ್ದೆವು. ಅವರು ಅದೇ ಜಾಡನ್ನು ಹಿಡಿದು ಹೊಸ ಕಮಿಟಿ ಮಾಡಲು ಹೊರಟಿದ್ದಾರೆ. ಇದಕ್ಕೆ ಸಮಾಜವೇ ಪ್ರತಿಕ್ರಿಯೆ ನೀಡಲಿದೆ. ಪಠ್ಯ ಪದೇ ಪದೇ ಬದಲಾವಣೆಯಿಂದ ಮಕ್ಕಳಿಗೆ ಸಮಸ್ಯೆ ಆಗಬಾರದು ಎಂಬ ಜವಾಬ್ದಾರಿ ಸರ್ಕಾರದ ಮೇಲಿದೆ, ಸರ್ಕಾರ ಏನು ಮಾಡಲಿದೆ ನೋಡೋಣ ಎಂದರು.
ಎನ್.ಇ.ಪಿ ರದ್ದು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಈಗ ಮಕ್ಕಳು ಅಧ್ಯಯನ ಪ್ರಾರಂಭಿಸಿದ್ದಾರೆ. ಎನ್.ಇ.ಪಿ ಮಾಡುವಾಗಲೇ ಸಮಿತಿ ಮಾಡಿ, ರಾಜ್ಯದ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ಎಲ್ಲ ಎಕ್ಸ್‌ಪರ್ಟ್ ಅಭಿಪ್ರಾಯ ಪಡೆದು ಜಾರಿಗೆ ತರಲಾಗಿದೆ. ಈಗ ರದ್ದು ಮಾಡುವುದು ಸರಿಯಲ್ಲ ಎಂದು ಹೇಳೀದರು.
ಗ್ಯಾರಂಟಿ ಯೋಚನೆ ವಿಚಾರ
ನಿನ್ನೆ ಸಿಎಂ ಸಭೆ ಮಾಡಿದ್ದಾರೆ. ಸುದೀರ್ಘ ಸಭೆಯಲ್ಲಿ ಏನಾಗಿದೆ ತಿಳಿದುಬಂದಿಲ್ಲ. ಮಾಧ್ಯಮದಿಂದ ತಿಳಿದ ವಿಚಾರವೆಂದರೆ ಎಲ್ಲ ಉಚಿತ ನೀಡಿದರೆ, ಅಭಿವೃದ್ಧಿ ಕಾರ್ಯ ಕುಂಟಿತಗೊಳ್ಳಲಿದೆ. ಆಶ್ವಾಸನೆ ನೀಡಿದ್ದು ಎಲ್ಲರಿಗೂ ಸಿಗುತ್ತದೆ ಅಂತ. ಅತ್ತೆಗೋ, ಸೊಸೆಗೋ ಅಂತ ಮೊದಲು ಹೇಳಿರಲಿಲ್ಲ. ಏನು ಮಾಡಲಿದ್ದಾರೆ ಅಂತ ಕರ್ನಾಟಕದ ಜನತೆಗೆ ಕಾದು ನೋಡಬೇಕಿದೆ. ಜನರನ್ನು ಯಾಮಾರಿಸಿ ಗೆಲ್ಲಬೇಕು ಅಂತ ಮಾಡಿದ್ದಾರೆ. ಜನ ಈಗ ಅಧಿಕಾರ ಕೊಟ್ಟಿದ್ದಾರೆ. ಏನು ಮಾಡುತ್ತಾರೆ ಅಂತ ಕಾದು ನೋಡೋಣ ಎಂದರು.