ಹೊಸದಿಗಂತ ವರದಿ ಮಂಡ್ಯ :
ನಾಯಕರ ನಡವಳಿಕೆಯಿಂದ ಜಿಲ್ಲೆಯಲ್ಲಿ ನಾವೇ ಕಟ್ಟಿ ಬೆಳೆಸಿದ ಜೆಡಿಎಸ್ ಬಿಟ್ಟುಹೋದೆವು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಜೆಡಿಎಸ್ ವಿರುದ್ಧ ಹರಿಹಾಯ್ದರು.
ತಾಲೂಕಿನ ಕೊತ್ತತ್ತಿ ಎರಡನೇ ಹೋಬಳಿ ತಗ್ಗಹಳ್ಳಿ ಗ್ರಾಮದಲ್ಲಿ ನಾಡಕಚೇರಿ ಕಟ್ಟಡದ ಶಂಕುಸ್ಥಾಪನೆ ಹಾಗೂ ಬಿಎಂಸಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ನಲ್ಲೇ ಇದ್ದಿದ್ದರೆ ಬಾಬು ಸೆಸ್ಕ್ ಅಧ್ಯಕ್ಷರಾಗುತ್ತಿರಲಿಲ್ಲ. 2006-07ರಲ್ಲಿ ಆರಂಭವಾದ ಸೆಸ್ಕ್ಗೆ ಯಾರೂ ಅಧ್ಯಕ್ಷರಾಗಿರಲಿಲ್ಲ. ರಮೇಶ್ ಬಂಡಿಸಿದ್ದೇಗೌಡರ ಕುಟುಂಬ ಕ್ಷೇತ್ರದ ಸೇವೆಗಾಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಜೆಡಿಎಸ್ನಲ್ಲಿ ನಾನು ಮಂತ್ರಿಯಾಗಿದ್ದು ಬೇರೆ, ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿಯಾಗಿರುವ ವ್ಯತ್ಯಾಸವೇ ಬೇರೆ ಎಂದು ಸ್ಪಷ್ಟಪಡಿಸಿದರು.
ಬರಗಾಲದ ಸಮಸ್ಯೆಯಲ್ಲಿ ಕುಟುಂಬ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ಸಹಕಾಗಿವೆ. 5 ಗ್ಯಾರಂಟಿ ಯೋಜನೆಗಳಿಗೆ ರಾಜ್ಯದಲ್ಲಿ 70ಸಾವಿರ ಕೋಟಿ ಖರ್ಚು ಮಾಡುತ್ತಿದ್ದು, ಪ್ರತಿ ಮನೆಗೆ 5 ರಿಂದ 7 ಸಾವಿರ ರೂ. ಹಣ ಬರುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿಯನ್ನೂ ರಚಿಸಲಾಗಿದೆ ಎಂದರು.
ಕೇಂದ್ರದ ಅನುದಾನ ಬಿಡುಗಡೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದಾಗ ರಾಷ್ಟ್ರವ್ಯಾಪಿ ಪ್ರಶಂಶೆ ವ್ಯಕ್ತವಾಗಿದೆ ಎಂದು ಪ್ರತಿಭಟನೆ ನಡೆಸಿದ್ದರ ಬಗ್ಗೆ ಸಮಜಾಯಿಸಿ ನೀಡಿದರು.