Saturday, September 23, 2023

Latest Posts

ಪುರಸಭೆಯಾಗಿ ಮೇಲ್ದರ್ಜೆಗೇರಿದ ವೀರಾಜಪೇಟೆ ಪಟ್ಟಣ ಪಂಚಾಯತ್

ಹೊಸದಿಗಂತ ವರದಿ,ಮಡಿಕೇರಿ:

ವೀರಾಜಪೇಟೆ ಪಟ್ಟಣ ಪಂಚಾಯಿತಿಯನ್ನು ಸರಕಾರ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದು, ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 3, 4, 9, ಮತ್ತು 385 ರ ಪ್ರಕರಣದ ಮೂಲಕ
ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯಪಾಲರು ಸರಕಾರದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಜ.4ರ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿದೆ.
ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಐವತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಜನಸಂಖ್ಯೆ ಹೊಂದಿರುವ, ಜನಸಂಖ್ಯೆ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ
ಒಂದು ಸಾವಿರದ ಐದು ನೂರಕ್ಕಿಂತ ಕಡಿಮೆಯಿಲ್ಲದ,
ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂತಹ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷಕ್ಕೆ ಅಥವಾ ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂ.ಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡಾ ಐವತ್ತಕ್ಕಿಂತ ಕಡಿಮೆಯಿಲ್ಲದ ಪ್ರದೇಶಗಳನ್ನು ಪುರಸಭೆಗಳನ್ನಾಗಿ ಘೋಷಿಸಲು ಅಧಿನಿಯಮದಲ್ಲಿ ಅವಕಾಶವಿದೆ.
ಅದರಂತೆ ಪ್ರಸಕ್ತ ವೀರಾಜಪೇಟೆ ಪಟ್ಟಣಕ್ಕೆ ಗ್ರಾಮ ಪಂಚಾಯತಿಯ ಕುಕ್ಲೂರು ಗ್ರಾಮದ ಭಾಗಶಃ,
ಮತ್ತು ಮಗ್ಗುಲ ಗ್ರಾಮದ ಭಾಗಶಃ ಪ್ರದೇಶಗಳು, ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಅಂಬಟ್ಟಿ ಗ್ರಾಮದ ಭಾಗಶಃ, ಆರ್ಜಿ ಪಂಚಾಯಿತಿಯ ಅರ್ಜಿ ಗ್ರಾಮದ ಭಾಗಶಃ ಮತ್ತು ಬೇಟೋಳಿ ಚು ಪಂಚಾಯಿತಿಯ ಬೇಟೋಳಿ ಗ್ರಾಮದ ಭಾಗಶಃ ಪ್ರದೇಶಗಳನ್ನು ಸೇರ್ಪಡೆಗೊಳಿಸಿ ವೀರಾಜಪೇಟೆ ಪಟ್ಡಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾರ್ಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು ಲಿಖಿತವಾಗಿ 30ದಿನಗಳ ಒಳಗಾಗಿ ‘ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ವಿ.ವಿ.ಪುರ, ಬೆಂಗಳೂರು ಇವರಿಗೆ ಸಲ್ಲಿಸಬಹುದಾಗಿದೆ.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಶಿಫಾರಸ್ಸು ಹಾಗೂ ಪ್ರಯತ್ನದಿಂದಾಗಿ ವೀರಾಜಪೇಟೆ ಪಟ್ಟಣ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!