ಅಧಿಕಾರಕ್ಕೆ ಬರಲು ಬಿಜೆಪಿ ಎಂತಹ ಕೆಲಸ ಮಾಡಲು ಹಿಂಜರಿಯುವುದಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

 ಹೊಸದಿಗಂತ ವರದಿ, ರಾಯಚೂರು :

ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಭಾಷಣದುದ್ದಕ್ಕೂ ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ, ಪ್ರಜ್ವಲ ರೇವಣ್ಣ ಮಾಡಿದ್ದಾರೆ ಎನ್ನಲಾಗುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಅಗ್ನಿವೀರ ಯೋಜನೆಯಿಂದ ಸೈನಿಕರಿಗೆ ಅನ್ಯಾಯ ಆಗುತ್ತದೆ ಇದು ಬಿಜೆಪಿ ಸರ್ಕಾರ ನೀತಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗುರುವಾರ ನಗರದ ಲಾಲ್‌ಕಟ್ ಮೈದಾನದಲ್ಲಿ ಜರುಗಿದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಸಂವಿಧಾನ ಬದಲಾಯಿಸುವ ಮೂಲಕ, ಆದಿವಾಸಿಗಳಿಗೆ, ಬಡವರಿಗೆ, ಹಿಂದುಳಿದ ವರ್ಗದವರಿಗೆ, ಕಾರ್ಮಿಕ ವರ್ಗದವರಿಗೆ ದೊರೆಯುವ ಸೌಲಭ್ಯಗಳನ್ನು ದೊರೆಯದಂತೆ ಮಾಡುವ ಹುನ್ನಾರವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಸಮಾನತೆಗಾಗಿ ಹೋರಾಡುವವರನ್ನು ನಕ್ಸಲರು, ಮಾವೋವಾದಿಗಳು, ಭಯೋತ್ಪಾದಕರು ಎಂದು ಬಿಜೆಪಿಯ ಜೆ.ಪಿ.ನಡ್ಡಾ ಅವರು ನೇರವಾಗಿ ಹೇಳಿಕೆಯನ್ನು ನೀಡಿದ್ದಾರೆ. ಇದು ಆದಿವಾಸಿಗಳಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ ಸಮಾನತೆ ಇರಬಾರದು ಎನ್ನುವುದು ಅವರ ಮಾತಿನಿಂದ ಸ್ಪಷ್ಟವಾಗಿ ತಿಳಿಯುತ್ತದೆ ಎಂದರು.

ನಡ್ಡಾ ಅವರ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಲ್ಲಿಯವರೆಗೂ ಒಂದೇ ಒಂದು ಮಾತನ್ನಾಡಿಲ್ಲ. ಇವರೂ ಸಹ ಇದಕ್ಕೆ ಸಹಮತವಿದೆ ಎನ್ನುವುದನ್ನು ತೋರಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಅವರು ಬಹಳ ಮೌನಕ್ಕೆ ತೆರಳಿದ್ದಾರೆ ಅನೇಕ ವಿಷಯಗಳ ಕುರಿತು ಮಾತನಾಡೇ ಮೌನಕ್ಕೆ ಜಾರುತ್ತಿದ್ದಾರೆ ಎಂದು ಮೋದಿಯವರು ಗಂಭೀರ ವಿಷಯಗಳ ಕುರಿತು ಮಾತನಾಡುವುದಿಲ್ಲ ಎಂದು ಹೇಳಿದರು.

ದೇಶದ ೭೦ ಕೋಟಿ ಜನರ ಆಸ್ತಿಗೆ ಸಮಾನವಾಗಿ ಕೇವಲ ೨೨ ಜನರ ಬಳಿಯಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ೨೨ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ೧೬ ಲಕ್ಷ ಕೋಟಿ ಸಾಲವನ್ನು ಮನ್ನಾ ಮಡಿದ್ದಾರೆ ಆದರೆ ದೇಶದ ರೈತರ ಸಾಲ ಮನ್ನಾ ಮಾಡುವುದಕ್ಕೆ ಇವರು ಮುಂದಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಳಿದ ಸಮುದಾಯಗಳಿಗೆ ಸರ್ಕಾರ ನೌಕರಿಯಲ್ಲಿ ಶೇ.೫೦ ಮೀಸಲು ಇಡಲಾಗುವುದು. ಪ್ರಜ್ವಲ ರೇವಣ್ಣ ೪೦೦ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ವ್ಯಕ್ತಿಯೋರ್ವರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರೂ ಇಂದಿನವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಬದಲಿಗೆ ಪ್ರಜ್ವಲ್ ಜರ್ಮನಿಗೆ ತೆರಳುವುದಕ್ಕೆ ಸಹಕಾರ ಮಾಡಿದ್ದಾರೆ. ಅಧಿಕಾರಕ್ಕೆ ಬರುವುದಕ್ಕೆ ಬಿಜೆಪಿ ಎಂತಹ ಕೆಲಸವನ್ನಾದರೂ ಮಾಡುವುದಕ್ಕೆ ಹಿಂಜರಿಯುವುದಿಲ್ಲ ಎಂದರು.

ವೇದಿಕೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಕೆ.ಸಿ.ವೇಣುಗೋಪಾಲ, ಕೆ.ಹೆಚ್.ಮುನಿಯಪ್ಪ, ತನ್ವೀರ ಶೇಠ, ವಿನಯಕುಮಾರ ಸೊರಕೆ, ತೇಜಸ್ವಿನಿಗೌಡ, ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!