ಹೊಸ ದಿಗಂತ ವರದಿ, ಮಂಡ್ಯ :
ರಾಜ್ಯದ ಬರ ಪರಿಸ್ಥಿತಿಗನುಗುಣವಾಗಿ ಕೇಂದ್ರ ಸರ್ಕಾರ ಪರಿಹಾರ ವಿತರಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ರಾಜ್ಯ ಸರ್ಕಾರದ ಪಾತ್ರವೇನು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ‌್ಯದರ್ಶಿ ಅಶ್ವತ್ಥನಾರಾಯಣ ಪ್ರಶ್ನಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಿದೆ. ಎಸ್‌ಡಿಆರ್‌ಎಫ್ ಖಾತೆಯಲ್ಲಿ 588 ಕೋಟಿ ಅನುದಾನ ಇದ್ದರೂ ಸಹ ಅದನ್ನು ಏಕೆ ಬಳಕೆ ಮಾಡಿಕೊಳ್ಳುತ್ತಿಲ್ಲ. ಮೊದಲು ಈ ಹಣವನ್ನು ವಿತರಿಸಲು ಕ್ರಮ ವಹಿಸುವಂತೆ ಒತ್ತಾಯಿಸಿದರು.
ತೆರಿಗೆ ಸಂಗ್ರಹದಲ್ಲೂ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಘೋಷಣೆ ಮಾಡಿದ್ದಾರೆ. ಆದರೂ ಸಂಪನ್ಮೂಲ ಇಲ್ಲ ಎಂದರೇ ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಅರ್ಧ ವರ್ಷದ ಸಾಧನೆಯನ್ನು ಜಾಹೀರಾತಿನಲ್ಲಿ ನೀಡಿ ತೆರಿಗೆ ಸಾಧನೆ ಬಗ್ಗೆ ತಿಳಿಸಿದೆ. ಇದರಲ್ಲಿ ವಾಣಿಜ್ಯ ತೆರಿಗೆಯಿಂದ 1.01 ಲಕ್ಷ ಕೋಟಿ ಗುರಿ ಇಟ್ಟುಕೊಂಡಿದ್ದು, ಇದರಲ್ಲಿ 44,766 ಕೋಟಿ ಸಂಗ್ರಹವಾಗಿದೆ. 36 ಸಾವಿರ ಕೋಟಿ ಅಬಕಾರಿ ಸುಂಕದ ಪೈಕಿ 16,775 ಕೋಟಿ ಸಂಗ್ರಹವಾಗಿದೆ. 25 ಸಾವಿರ ಕೋಟಿ ಸ್ಟಾಂಪ್ ಮತ್ತು ನೋಂದಣಿ ತೆರಿಗೆ ಸಂಗ್ರಹದ ಗುರಿಯಲ್ಲಿ 9614 ಕೋಟಿ ಸಂಗ್ರಹವಾಗಿದೆ. 11,500 ಕೋಟಿ ವಾಹನ ಸಂಗ್ರಹದ ಗುರಿ ಪೈಕಿ 5226 ಕೋಟಿ ಸೇರಿದಂತೆ ಒಟ್ಟಾರೆ 76,181 ಕೋಟಿ ರೂ. ತೆರಿಗೆಯಲ್ಲೇ ಸಂಗ್ರಹಿಸಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಇಷ್ಟು ಹಣವಿದ್ದರೂ ಸಹ ಬರಪೀಡಿತ ಪ್ರದೇಶಗಳಿಗೆ ಪರಿಹಾರ ವಿತರಣೆಗೆ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ರಾಜ್ಯಾದ್ಯಂತ ವಿಪರೀತ ಮಳೆ, ಅತೀವೃಷ್ಠಿಯಾಗಿತ್ತು. ಏಕಾಂಗಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಮನೆ ಕಳೆದುಕೊಂಡವರಿಗೆ 5 ಲಕ್ಷ, ಹಾನಿಗೊಳಗಾದವರಿಗೆ 1, 2 ಲಕ್ಷ ಪರಿಹಾರ ನೀಡಿದ್ದಾರೆ, ಕೋವಿಡ್ ಸಂದರ್ಭದಲ್ಲೂ ಅಸಂಘಟಿತ ಕಾರ್ಮಿಕರಿಗೆ 860 ಕೋಟಿ ಸೇರಿದಂತೆ ವಿವಿಧ ರೀತಿಯ ಪರಿಹಾರ ವಿತರಣೆ ಮಾಡಿದ್ದಾರೆ. ಅವರು ಎಂದೂ ಕೇಂದ್ರದ ಅನುದಾನಕ್ಕಾಗಿ ಕಾಯಲಿಲ್ಲ. ಇಂತಹ ವ್ಯವಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.