ಗ್ಯಾರಂಟಿ ಯೋಜನೆಗೆ ಆದಾಯ ಮೂಲ ಯಾವುದು?: ಸರಕಾರಕ್ಕೆ ನಳಿನ್‍ ಕುಮಾರ್ ಕಟೀಲ್ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಪಕ್ಷವು ಚುನಾವಣೆ ದೃಷ್ಟಿಯಿಂದ ಸ್ಪಷ್ಟತೆ ಇಲ್ಲದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದನ್ನು ಸ್ಪಷ್ಟ ವಿವರಗಳಿಲ್ಲದೆ ಇದೀಗ ಅನುಷ್ಠಾನಕ್ಕೆ ತರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ.

ಈ ಯೋಜನೆಗಳ ಅನುಷ್ಠಾನವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇದಕ್ಕೆ ಬೇಕಾದ ಆದಾಯ ಮೂಲ ಎಲ್ಲಿಂದ ಎಂದು ಪ್ರಶ್ನಿಸಿರುವ ಅವರು, ಈ ಕುರಿತಂತೆ ಶ್ವೇತಪತ್ರ ಹೊರಡಿಸಲು ಆಗ್ರಹಿಸಿದ್ದಾರೆ. ಹಣ ಕ್ರೋಡೀಕರಣ ಎಲ್ಲಿಂದ ಎಂದು ಅವರು ಕೇಳಿದ್ದಾರೆ.

ಪ್ರಣಾಳಿಕೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿದ್ದೀರಿ. ಕೇಂದ್ರ ಸರಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದೆ. ಅದರ ಜೊತೆ ಹೆಚ್ಚುವರಿ 10 ಕೆಜಿ ಅಕ್ಕಿ ಕೊಡುತ್ತೀರಾ? ಅದಲ್ಲದೆ ನಮ್ಮ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎರಡು ಕೆಜಿ ಹೆಚ್ಚುವರಿ ಆಹಾರಧಾನ್ಯ ಕೊಡುತ್ತಿದ್ದರು. ಅದನ್ನು ನಿಮ್ಮ ಸರಕಾರ ಮುಂದುವರಿಸಲಿದೆಯೇ ಎಂದು ಕೇಳಿದ್ದಾರೆ.

ಚುನಾವಣೆಯೊಂದನ್ನೇ ದೃಷ್ಟಿಯಲ್ಲಿಟ್ಟು, ಅಧಿಕಾರ ಗಳಿಸುವ ಭರಾಟೆಯಲ್ಲಿ ತರಾತುರಿಯಲ್ಲಿ ಗ್ಯಾರಂಟಿಗಳನ್ನು ಪ್ರಕಟಿಸಲಾಗಿತ್ತು. ಈಗ ಸ್ಪಷ್ಟತೆಗಳಿಲ್ಲದೆ ಒಬ್ಬರು ಮುಖ್ಯಮಂತ್ರಿಗಳು ಮಾತನಾಡುತ್ತಿರುವುದು ಎಷ್ಟು ಸೂಕ್ತ ಎಂದು ಅವರು ಪ್ರಶ್ನಿಸಿದ್ದಾರೆ.

ಮನೆಯ ಯಜಮಾನಿಗೆ ಹಣ ಎನ್ನುತ್ತೀರಿ. ಆ ‘ಯಜಮಾನಿ’ ಶಬ್ದದ ಕುರಿತು ಸ್ಪಷ್ಟತೆಯೇ ಇಲ್ಲ ಎಂದಿರುವ ಅವರು, ಯುವ ನಿಧಿ ಎಂದರೇನು? ನಿರುದ್ಯೋಗಿಗಳ ನಿಜವಾದ ವ್ಯಾಖ್ಯಾನ ಏನು? ಪದವಿ, ಡಿಪ್ಲೊಮಾ ಪಾಸಾಗಿ ಕೆಲವು ವರ್ಷಗಳಿಂದ ಉದ್ಯೋಗ ಸಿಗದೆ ಇರುವವರನ್ನು ಪರಿಗಣಿಸದೆ ಇರಲು ಕಾರಣ ಏನು? ಅವರಿಗೆ ಯುವ ನಿಧಿ ಕೊಡುತ್ತಿಲ್ಲವೇಕೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
2022-23ರಲ್ಲಿ ಪಾಸಾದವರಿಗೆ 24 ತಿಂಗಳು ಯುವ ನಿಧಿ ಕೊಡುವುದಾಗಿ ತಿಳಿಸಿದ್ದೀರಿ. ಹಿಂದೆ ಓದಿ ನಿರುದ್ಯೋಗಿಗಳಾಗಿಯೇ ಇರುವವರು ಇದರಿಂದ ನ್ಯಾಯವಂಚಿತರಾಗುವುದಿಲ್ಲವೇ ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದಾರೆ. ಇದೆಲ್ಲ ಯೋಜನೆಗಳಿಗೆ ಹಣ ಸಂಗ್ರಹಕ್ಕೆ ತೆರಿಗೆದಾರರ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತೀರಲ್ಲವೇ ಎಂದು ಕೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ, ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಇಂಥ ಯೋಜನೆ ನೀಡಿದರೆ ಕರ್ನಾಟಕವು ಪಾಕಿಸ್ತಾನ ಮತ್ತು ಶ್ರೀಲಂಕಾದಂತೆ ಆರ್ಥಿಕ ಹಿಂಜರಿತವನ್ನು ಕಾಣಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!