ಹೊಸದಿಗಂತ ವರದಿ ಶಿವಮೊಗ್ಗ:
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿರೋದನ್ನ ಎಲ್ಲರೂ ನೋಡುತ್ತಿದ್ದೇವೆ. ಇದರ ಬಗ್ಗೆ ತನಿಖೆ ಆಗಲೇಬೇಕು ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಒತ್ತಾಯಿಸಿದರು.
ಅವರು ಏನು ಮಾತನಾಡುತ್ತಿದ್ದಾರೆ ಯಾರಿಗೆ ನಿರ್ದೇಶನ ನೀಡುತ್ತಿದ್ದಾರೆ? ಸಿದ್ದರಾಮಯ್ಯ ಅವರಿಗೆ ಅಧಿಕಾರದ ಹಕ್ಕಿದೆ. ಆದರೆ ಅವರ ಮಗ ಮೂಗು ತೂರಿಸುತ್ತಿರುವುದು ತಪ್ಪು ಎಂದರು.
ತೀರ್ಥಹಳ್ಳಿಯಲ್ಲಿ ಮಾತನಾಡಿ, ಈ ವಿಚಾರ ನಿಜವಾಗಲೂ ರಾಜ್ಯದ ಜನರ ಅರಿವಿಗೆ ಬರಬೇಕಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಹಾಗೆ ಸಿದ್ದರಾಮಯ್ಯ ಅವರು ಜನರಿಗೆ ಏನಾಗಿದೆ ಎಂಬುದರ ಬಗ್ಗೆ ತಿಳಿಸಿಕೊಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಆರು ಪೈಸದ ಅಭಿವೃದ್ಧಿ ಮಾಡುವುದಕ್ಕೆ ಸಿದ್ದರಾಮಯ್ಯ ಅವರು ಹಣ ನೀಡಿಲ್ಲ. ಆದರೆ ಆರು ತಿಂಗಳಲ್ಲಿ ಇಷ್ಟು ಕೆಟ್ಟ ಹೆಸರು ಪಡೆದುಕೊಂಡ ಸರ್ಕಾರ ಮತ್ತೊಂದಿಲ್ಲ ಎಂದು ಕುಟುಕಿದರು.
135 ಸ್ಥಾನ ಬಂದಿದೆ ಎಂಬ ಕಾರಣಕ್ಕೆ ಈ ರೀತಿ ಮಾಡೋದು ಸರಿಯಲ್ಲ. ತಾವು ಏನು ಮಾಡಿದರೂ ನಡೆಯುತ್ತದೆ ಎಂದುಕೊಂಡರೆ ಅದು ಖಂಡಿತವಾಗಲೂ ಆಗೋದಿಲ್ಲ. ಬಿಜೆಪಿ ಸರ್ಕಾರ ಇದ್ದಾಗ 40 ಪರ್ಸೆಂಟ್ ಸರ್ಕಾರ ಎಂದು ಬೊಬ್ಬೆ ಹೊಡೆದು ಈಗ ಇವರು ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದರು.