ಪಾಸ್​ ಆದ ಖುಷಿಯಲ್ಲಿದ್ದ ಬಾಲಕಿಯ ರುಂಡ ಕಡಿದ ದುಷ್ಕರ್ಮಿ, ಅಸಲಿಗೆ ನಡೆದಿದ್ದೇನು?

ಹೊಸದಿಗಂತ ಮಡಿಕೇರಿ:

ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತೀರ್ಣಳಾದ ಸಂತೋಷದಲ್ಲಿರಬೇಕಿದ್ದ ಬಾಲೆಯೊಬ್ಬಳು ಸಂಜೆ ವೇಳೆ ಹತ್ಯೆಗೊಳಗಾದ ಘಟನೆ ಗುರುವಾರ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದೆ.

ಸೂರ್ಲಬ್ಬಿ ಗ್ರಾಮದ ಸುಬ್ರಮಣಿ ಎಂಬವರ ಪುತ್ರಿ ಯು.ಎಸ್.ಮೀನಾ(16) ಎಂಬಾಕೆಯೇ ಹತ್ಯೆಗೀಡಾದವಳಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ.

ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ಏಕೈಕ ವಿದ್ಯಾರ್ಥಿನಿಯಾಗಿದ್ದ ಯು.ಎಸ್.ಮೀನಾ ಗುರುವಾರ ಪ್ರಕಟವಾದ ಪರೀಕ್ಷಾ ಫಲಿತಾಂಶದಲ್ಲಿ ತೇರ್ಗಡೆ ಹೊಂದುವುದರೊಂದಿಗೆ ಶಾಲೆಗೆ ಶೇ.100 ಫಲಿತಾಂಶ ಲಭಿಸಿತ್ತು. ಇದು ಅವರ ಕುಟುಂಬದವರಿಗೆ ಮಾತ್ರವಲ್ಲದೆ ಗ್ರಾಮದಲ್ಲೂ ಸಂತೋಷಕ್ಕೆ ಕಾರಣವಾಗಿತ್ತು.

ಆದರೆ ಈ ಸಂತೋಷ ಸಂಜೆ ವೇಳೆಗೆ ಗ್ರಾಮದಿಂದ ಮರೆಯಾಗಿತ್ತು. ದುಷ್ಕರ್ಮಿಯೊಬ್ಬ ಆಕೆಯ ಮನೆಗೆ ನುಗ್ಗಿ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಮನೆಯಿಂದ ಎಳೆದೊಯ್ದದ್ದಲ್ಲದೆ, ಆಕೆಯ ತಲೆಯನ್ನು ಕತ್ತರಿಸಿ ಅದರೊಂದಿಗೆ ಪರಾರಿಯಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ ಆಕೆಯನ್ನು ವಿವಾಹವಾಗಲಿದ್ದ ಪ್ರಕಾಶ್ (32) ಎಂಬಾತನೇ ಈ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ.

ಮೀನಾ ಹಾಗೂ ಪ್ರಕಾಶನ ಮದುವೆ ಮಾಡಿಸುವ ಸಲುವಾಗಿ ಮನೆ ಮಂದಿ ನಿನ್ನೆಯಷ್ಟೇ ನಿಶ್ಚಿತಾರ್ಥ ಏರ್ಪಡಿಸಿದ್ದರು. ಈ ಮಾಹಿತಿ ಮಕ್ಕಳ ಸಹಾಯವಾಣಿಗೆ ಲಭಿಸಿದ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೌನ್ಸೆಲಿಂಗ್‌ ಮಾಡಿದ್ದರು. ಆಕೆಗೆ 18 ವರ್ಷ ತುಂಬಿದ ನಂತರ ಮದುವೆ ಮಾಡಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.

ಆದರೆ ಸಂಜೆ 5:30ರ ಸುಮಾರಿಗೆ ಬಾಲಕಿಯರ ಮನೆಗೆ ತೆರಳಿದ ಪ್ರಕಾಶ, ಸುಬ್ರಮಣಿ ಅವರ ಮೇಲೆ ಹಲ್ಲೆ ನಡೆಸಿ, ತಾಯಿಗೂ ಗಾಯಗೊಳಿಸಿ ಬಾಲಕಿಯನ್ನು 100 ಮೀಟರ್’ವರೆಗೆ ಎಳೆದೊಯ್ದಿದ್ದಲ್ಲದೆ, ಅಲ್ಲಿ ಆಕೆಯನ್ನು ಕತ್ತರಿಸಿ ತಲೆ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!