ರಾಜ್ಯದಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಅಧಿಕಾರ?: ಚುನಾವಣೆಪೂರ್ವ ಸಮೀಕ್ಷೆ ಏನು ಹೇಳುತ್ತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Elections 2023) ಡೇಟ್ ಫಿಕ್ಸ್ ಆಗಿದ್ದು, ಮೇ 10ರಂದು ಚುನಾವಣೆ ನಡೆಯಲಿದ್ದು, 13ಕ್ಕೆ ಫಲಿತಾಂಶ ಪ್ರಕಟವಾಗಿದೆ.
ಇದರ ಬೆನ್ನಲ್ಲೇ, ಚುನಾವಣೆ ಕುರಿತು ಎಬಿಪಿ-ಸಿವೋಟರ್‌ ಹಾಗೂ ಜೀ ನ್ಯೂಸ್‌-ಮ್ಯಾಟ್ರಿಜ್‌ ಚುನಾವಣೆಪೂರ್ವ ಸಮೀಕ್ಷೆ ನಡೆಸಿವೆ.

ಎಬಿಪಿ-ಸಿವೋಟರ್‌ ವರದಿ:

ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಎಬಿಪಿ-ಸಿವೋಟರ್‌ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ 115-127 ಸೀಟುಗಳನ್ನು ಪಡೆದು ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ಇನ್ನು ಬಿಜೆಪಿಗೆ 68-80 ಸೀಟು ಹಾಗೂ ಜೆಡಿಎಸ್‌ಗೆ 23-35 ಸೀಟುಗಳು ಮಾತ್ರ ಲಭ್ಯವಾಗಲಿವೆ ಎಂದು ತಿಳಿದುಬಂದಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯ ತೀವ್ರ ಪೈಪೋಟಿ ಇದೆ ಎಂದು ಸಮೀಕ್ಷೆ ತಿಳಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಶೇ.44ರಷ್ಟು ಮತಗಳನ್ನು ಪಡೆದರೆ, ಬಿಜೆಪಿಯು ಶೇ.37ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್‌ 19-23 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿ 8-12 ಸೀಟುಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ.

ಎಬಿಪಿ-ಸಿವೋಟರ್‌ ಸಮೀಕ್ಷೆ ಪ್ರಕಾರ, ಮುಂಬೈ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಕ್ಷೇತ್ರಗಳು ಲಭಿಸಲಿವೆ. ಲಿಂಗಾಯತರೇ ಪ್ರಬಲವಾಗಿರುವ, ಬಿಜೆಪಿಗೆ ಹೆಚ್ಚಿನ ಬೆಂಬಲ ಇರುವ ಮುಂಬೈ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ 25-29 ಹಾಗೂ ಬಿಜೆಪಿ 21-25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.

ಕರಾವಳಿ ಭಾಗದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದ್ದು, 9-13 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಇನ್ನು ಕಾಂಗ್ರೆಸ್‌ 8-12 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಆದಾಗ್ಯೂ, ಕೇಂದ್ರ ಕರ್ನಾಟಕದಲ್ಲೂ ಕಾಂಗ್ರೆಸ್‌ (18-22) ಪ್ರಾಬಲ್ಯ ಸಾಧಿಸುವ ಲಕ್ಷಣ ಇರುವುದರಿಂದ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ. ಬಿಜೆಪಿಯು ಈ ಭಾಗದಲ್ಲಿ 12-16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವರದಿ ತಿಳಿಸಿದೆ.

ಜೀ ನ್ಯೂಸ್‌-ಮ್ಯಾಟ್ರಿಜ್‌ ವರದಿ 

ಜೀ ನ್ಯೂಸ್-ಮ್ಯಾಟ್ರಿಜ್‌ ಜನಾಭಿಪ್ರಾಯ ಸಂಗ್ರಹ ವರದಿ ಪ್ರಕಾರ, ಬಿಜೆಪಿಯೇ ಈ ಬಾರಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ. ಬಿಜೆಪಿಯು ಚುನಾವಣೆಯಲ್ಲಿ 96-106, ಕಾಂಗ್ರೆಸ್‌ 88-98 ಹಾಗೂ ಜೆಡಿಎಸ್‌ 23-33 ಹಾಗೂ ಪಕ್ಷೇತರ ಅಥವಾ ಇತರೆ 02-07 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!