ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು (ಭಾನುವಾರ) ಚುನಾವಣೆ ಪ್ರಚಾರದ ವೇಳೆ ಅಸ್ವಸ್ಥರಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯವಾಗಿದ್ದಾರೆ ಎಂದು ಪುತ್ರ, ಕರ್ನಾಟಕ ಮಾಹಿತಿ ತಂತ್ರಜ್ಞಾನ ಸಚಿವ ಆಗಿರುವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ನೀಡಿರುವ ಪ್ರಿಯಾಂಕ್ ಖರ್ಗೆ, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಖರ್ಗೆ ಸ್ವಲ್ಪ ಅಸ್ವಸ್ಥರಾಗಿದ್ದರು’ ಎಂದು ತಿಳಿಸಿದ್ದಾರೆ.
‘ವೈದ್ಯಕೀಯ ತಂಡವು ಖರ್ಗೆ ಅವರನ್ನು ಪರೀಕ್ಷಿಸಿದ್ದು, ರಕ್ತದೊತ್ತಡ ಅಲ್ಪ ಕಡಿಮೆಯಾಗಿರುವುದನ್ನು ಹೊರತುಪಡಿಸಿದರೆ ಅವರು ಆರೋಗ್ಯಕರವಾಗಿದ್ದಾರೆ. ನಿಮ್ಮೆಲ್ಲರ ಕಾಳಜಿಗೆ ಕೃತಜ್ಞನಾಗಿದ್ದೇನೆ’ ಎಂದು ಹೇಳಿದ್ದಾರೆ.
‘ದೃಢ ಸಂಕಲ್ಪ, ಹಿತೈಶಿಗಳ ಶುಭ ಹಾರೈಕೆಯಿಂದ ಮತ್ತಷ್ಟು ಪ್ರಬಲರಾಗಿ ಅವರು ಮುಂದುವರಿಯಲಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.