Wednesday, November 30, 2022

Latest Posts

ಬಿಸಿಸಿಐ ಹೊಸ ಬಾಸ್ ರೋಜರ್‌ ಬಿನ್ನಿ ಯಾರು? ಆಟಗಾರನಾಗಿ, ಆಡಳಿತಗಾರನಾಗಿ ಬಿನ್ನಿ ಸಾಧನೆಗಳೇನು? 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮತ್ತೊಮ್ಮೆ ಬದಲಾವಣೆಗೆ ತೆರೆದುಕೊಂಡಿದೆ. ಮುಖ್ಯ ಕೋಚ್‌ ಬಳಿಕ ಇದೀಗ ಬಿಸಿಸಿಸಿ ಬಿಗ್ ಬಾಸ್‌ ಪಟ್ಟವೂ ಕನ್ನಡಿಗರ ಪಾಲಾಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ 1983 ರ ವಿಶ್ವಕಪ್ ಹೋರೋ ಆಗಿ ಮಿಂಚಿದ್ದ ಆಟಗಾರ ಇದೀಗ ಭಾರತದ ಕ್ರಿಕೆಟ್‌ ವ್ಯವಹಾರಗಳ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
ರೋಜರ್ ಬಿನ್ನಿ.. ಈ ಹೆಸರು ಭಾರತದ ಕ್ರಿಕೆಟ್‌ ವಲಯದಲ್ಲಿ ಚಿರಪರಿಚಿತವೇನಲ್ಲ. ಆರ್ಸಿಬಿ ಮತ್ತಿತರ ಪ್ರಾಂಚೈಸಿಗಳಲ್ಲಿ ಮಿಂಚಿದ ಸ್ಟುವರ್ಟ್‌ ಬಿನ್ನಿ ಅಪ್ಪ ಎಂಬುದು ಬಹಳಷ್ಟು ಅಭಿಮಾನಿಗಳಿಗೆ ಗೊತ್ತು. ಆದರೆ 1983ರ ವರ್ಡ್‌ ಕಪ್‌ ನೆನಪುಗಳನ್ನು ಎದೆಯಲ್ಲಿ ಹಸಿಯಾಗಿರಿಸಿಕೊಂಡವರಿಗೆ ರೋಜರ್‌ ಬಿನ್ನಿ ಎಂತಹ ಅದ್ಬುತ ಆಟಗಾರನೆಂಬುದು ಗೊತ್ತಿರುತ್ತದೆ.
1955 ರಲ್ಲಿ ಕರ್ನಾಟಕದಲ್ಲಿ ಜನಿಸಿದ ರೋಜರ್ ಮೈಕೆಲ್ ಹಂಫ್ರಿ ಬಿನ್ನಿ ಅವರು ಭಾರತಕ್ಕಾಗಿ ಕ್ರಿಕೆಟ್ ಆಡಿದ ಆಂಗ್ಲೋ-ಇಂಡಿಯನ್ ಸಮುದಾಯದ ಮೊದಲ ಆಟಗಾರ. ಮಧ್ಯಮವೇಗಿ ಮತ್ತು ಲೋವರ್‌ ಆರ್ಡರ್‌ ನಲ್ಲಿ ಉಪಯುಕ್ತ ಬ್ಯಾಟ್ಸ್‌ ಮನ್‌ ಆಗಿದ್ದ ಬಿನ್ನಿ 1979 ರಲ್ಲಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ಮಧ್ಯಮ ವೇಗಿ ಹಾಗೂ ಲೋವರ್‌ ಆರ್ಡರ್‌ ನಲ್ಲಿ ಉಪಯುಕ್ತ ಬ್ಯಾಟ್ಸ್‌ ಮನ್‌ ಆಗಿದ್ದ ಬಿನ್ನಿ ತಂಡದ ಅವಿಭಾಜ್ಯ ಆಟಗಾರನಾಗಿ ಹೊರಹೊಮ್ಮಿದರು.
1983 ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಬಿನ್ನಿ ಆ ವಿಶ್ವಕಪ್‌ ನಲ್ಲಿ ಅತಿ ಹೆಚ್ಚು ವಿಕೆಟ್ (18) ಗಳಿಸಿದ್ದ ಸಾಧನೆ ಬರೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಬಿನ್ನಿ 10 ಓವರ್​ಗ​ಳಲ್ಲಿ ಕೇವಲ 23 ರನ್​ಗಳನ್ನು ನೀಡುವ ಮೂಲಕ ಭಾರತ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಧಾನ ಪಾತ್ರವಗಹಿಸಿದ್ದರು. ಆ ಬಳಿಕ 1985 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವ ಸರಣಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ 17 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್‌ ಪಡೆದ ಸಾಧನೆಯನ್ನು ಪುನರಾವರ್ತಿಸಿದರು. ತಮ್ಮ ವೃತ್ತಿಜೀವನದಲ್ಲಿ ಭಾರತಕ್ಕಾಗಿ 27 ಟೆಸ್ಟ್ ಪಂದ್ಯಗಳನ್ನು ಆಡಿರುವ ಬಿನ್ನಿ 47 ವಿಕೆಟ್‌ ಗಳನ್ನು ಪಡೆದಿದ್ದಾರೆ. 72 ಏಕದಿನ ಪಂದ್ಯಗಳನ್ನು ಆಡಿ 77 ವಿಕೆಟ್‌ ಗಳನ್ನು ಕಬಳಿಸಿದ್ದಾರೆ.

ದೇಶಿ ಕ್ರಿಕೆಟ್‌ ನಲ್ಲಿ ಅಪಾರ ಸಾಧನೆ: 
ಅವರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಬಿನ್ನಿ ಹಲವಾರು ಸಾಧನೆಗಳ ಒಡೆಯ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 136 ಪಂದ್ಯಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಬಿನ್ನಿ 205 ವಿಕೆಟ್ ಹಾಗೂ 6579 ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ. 22 ರನ್​ಗೆ 8 ವಿಕೆಟ್ ಪಡೆದಿರುವುದು ಜೀವನ ಶ್ರೇಷ್ಠ ಸಾಧನೆ. ಕ್ರಿಕೆಟ್ ಗೆ ರಾಜೀನಾಮೆ ನೀಡಿದ ಬಳಿಕ ರೋಜರ್ ಬಿನ್ನಿ ಕೋಚ್‌ ಹುದ್ದೆ ನಿರ್ವಹಿಸಿದರು. ಆ ಬಳಿಕ ಅವರು ಭಾರತ ಅಂಡರ್-19 ಕೋಚ್ ಆದರು. 2000 ರಲ್ಲಿ ಅವರು ಕೋಚ್‌ ಆಗಿದ್ದಾಗ ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ ಅವರಂತಹ ಆಟಗಾರರಿದ್ದ ಅಂಡರ್‌ 19 ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2012 ರ ಸೆಪ್ಟೆಂಬರ್‌ನಲ್ಲಿ ಅವರು ಬಿಸಿಸಿಐ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸಿದರು. ಬಿನ್ನಿ ಬಂಗಾಳ ರಣಜಿ ಟ್ರೋಫಿ ತಂಡದ ಕೋಚ್ ಕೂಡ ಆಗಿದ್ದರು.

ಬಿನ್ನಿ ಬಿಸಿಸಿಐ ಹೊಸ ಬಾಸ್:‌
ಸೌರವ್ ಗಂಗೂಲಿ ನಂತರ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಲು ಸಿದ್ಧರಾಗಿದ್ದಾರೆ. ಹಲವು ಮಾಧ್ಯಮಗಳ ವರದಿಗಳ ಪ್ರಕಾರ, ಬಿನ್ನಿ ಅವರು ಬಿಸಿಸಿಐ ಉನ್ನತ ಹುದ್ದೆಗೆ ಈಗಾಗಲೇ ನಾಮಪತ್ರ ಸಲ್ಲಿಸಲಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಎಜಿಎಂ ಸಭೆಯ ನಂತರ ಅಕ್ಟೋಬರ್ 18 ರಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಲಾಗಿದೆ.
ಕಳೆದ ಒಂದು ವಾರದಲ್ಲಿ ಬಿಸಿಸಿಐ ಅಧ್ಯಕ್ಷಗಾದಿಗೆ ಯಾರನ್ನು ಆಯ್ಕೆಮಾಡುವುದು ಎಂಬುದರ ಬಗ್ಗೆ ತೀವ್ರ ಚರ್ಚೆಗಳನ್ನು ನಡೆಸಿದ ಬಳಿಕ ಬಿಸಿಸಿಐನ ಹಿರಿಯ ತಲೆಗಳು 67 ವರ್ಷದ ರೋಜರ್‌ ಬಿನ್ನಿಯವರನ್ನು ಮಂಡಳಿಯ 36 ನೇ ಅಧ್ಯಕ್ಷರಾಗಿ ನಿಯುಕ್ತಗೊಳಿಸಲು ನಿರ್ಧರಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದರಿಂದ ಯಾವುದೇ ಹುದ್ದೆಗೆ ಚುನಾವಣೆ ಇರುವುದಿಲ್ಲ.

ರೋಜರ್ ಬಿನ್ನಿಯೇ ಏಕೆ?
ಒಂದು ರೀತಿಯಲದಲಿ ಬಿಸಿಸಿಐ ಮುಖ್ಯಸ್ಥರ ಹುದ್ದೆಗೆ ರೋಜರ್‌ ಬಿನ್ನಿ ಅಚ್ಚರಿಯ ಆಯ್ಕೆಯಾಗಿದ್ದಾರೆ.
ಬಿಸಿಸಿಐ ಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರತಿನಿಧಿಯಾಗಿ ಹಾಲಿ ಅಧ್ಯಕ್ಷ ರೋಜರ್‌ ಬಿನ್ನಿ ಸ್ಥಾನದಲ್ಲಿ ಕಾರ್ಯದರ್ಶಿ ಸಂತೋಷ್ ಮೆನನ್ ಅವರನ್ನು ಹೆಸರಿಸಿದಾಗ,ಬಿನ್ನಿ ಬಿಸಿಸಿಐನಲ್ಲಿ ಉನ್ನತ ಹುದ್ದೆ ಪಡೆಯುತ್ತಾರೆ ಎಂಬ ಸುಳಿವು ಸಿಕ್ಕಿತ್ತು. ಮಹತ್ವದ ಹುದ್ದೆಗೆ ಸ್ಪರ್ಧಿಸುವವರು ರಾಜ್ಯಸಂಸ್ಥೆಯನ್ನು ಪ್ರತಿನಿಧಿಸುವಂತಿಲ್ಲ.
ಆಟಗಾರನಾಗಿ, ಆಡಳಿತಗಾರನಾಗಿ ʼಕ್ಲೀನ್ ಇಮೇಜ್ʼ ರೋಜರ್‌ ಬಿನ್ನಿಯವರ ಶಕ್ತಿಯಾಗಿದೆ. ಅವರ ಮಗ ಸ್ಟುವರ್ಟ್ ಬಿನ್ನಿ ಭಾರತ ತಂಡಕ್ಕೆ ಆಯ್ಕೆಯಾದಾಗ ರೋಜರ್‌ ತಂಡದ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದರು. “ರೋಜರ್ ಭಾರತ ಕ್ರಿಕೆಟ್‌ ಕ್ಷೇತ್ರದ ಅತ್ಯುತ್ತಮ ಆಟಗಾರರಲ್ಲೊಬ್ಬರು. ಜೊತೆಗೆ ಸಂಪೂರ್ಣ ಸಂಭಾವಿತ ವ್ಯಕ್ತಿ. ಅವರ ಕ್ಲೀನ್ ಇಮೇಜ್ ಗಮನದಲ್ಲಿಟ್ಟುಕೊಂಡೇ ಅವರಿಗೆ ಬಿಸಿಸಿಐನ ದೊಡ್ಡ ಹಿದ್ದೆ ನೀಡಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರೋಜರ್ ಬಿನ್ನಿ ಮುಂದೇನು?
ಬಿನ್ನಿ ಅಧಿಕಾರ ವಹಿಸಿಕೊಂಡ ನಂತರ ಬಿಸಿಸಿಐನ ಮುಖವಾಗಲಿದ್ದಾರೆ. ಹಿಂದಿನ ಅಧ್ಯಕ್ಷ ಸೌರವ್‌ ಗಂಗೂಲಿ ಅಗ್ರೆಸ್ಸಿವ್‌ ಸ್ವಭಾವದವರು. ದಾದಾ ಹಠಮಾರಿ ಧೋರಣೆಯೇ ಅವರಿಗೆ ಮುಳುವಾಯ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಈಗ ಅವರ ಸ್ಥಾನಕ್ಕೆ ಸೌಮ್ಯ ಸ್ವಭಾವದ ರೋಜರ್‌ ಬಿನ್ನಿ ಬರುತ್ತಿದ್ದಾರೆ. ಯಾರೇ ಬದಲಾಗದರೂ ಬಿಸಿಸಿಐನಲ್ಲಿ ಕಾರ್ಯದರ್ಶಿ ಜಯ್ ಶಾ ಎಂತಹ ಪ್ರಭಾವಶಾಲಿಯಾಗಿದ್ದಾರೆ ಎಂಬುದು ಗುಟ್ಟಿನ ವಿಚಾರವಲ್ಲವಾದ್ದರಿಂದ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ಐಪಿಎಲ್ 2023 ಅನ್ನು ಆಯೋಜಿಸುವುದು, ಕೋವಿಡ್-ಪೂರ್ವ ಯುಗಕ್ಕೆ ದೇಶೀಯ ಪಂದ್ಯವಳಿಗಳನ್ನು ಮರಳಿ ತರುವುದು ಬಿನ್ನಿ ಅವರ ಕೆಲವು ಪ್ರಮುಖ ಕಾರ್ಯಸೂಚಿಗಳಲ್ಲಿ ಸೇರಿರಬಹುದು. ಆಡಳಿತಗಾರನಾಗಿ ರೋಜರ್‌ ಬಿನ್ನಿ ಯಶಸ್ವಿಯಾದರೆ ಅದು ಭಾರತೀಯ ಕ್ರಿಕೆಟ್‌ ಗೆ ಕರ್ನಾಟಕದಿಂದ ಮತ್ತೊಂದು ಮಹತ್ವದ ಕೊಡುಗೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!